Sunday, December 30, 2018

ಮೊದಲು ಪ್ರೀತಿಸಿದೆ

ನೀ ಬರುವ ಮುನ್ನ
ನಾ ಬರುವೆ
ನೀ ಕಾಯುವ ಮುನ್ನ
ನಾ ಕಾಯುವೆ
ನೀ ಹೇಳುವ ಮುನ್ನ
ನಾ ಹೇಳುವೆ
ನೀ ಪ್ರೀತಿಸುವ ಮುನ್ನ
ನಾ ಪ್ರೀತಿಸಿದೆ.

Tuesday, December 25, 2018

ನೋಡಬೇಡ


ಹಾಗೆಂದು ತಿರುಗಿ
ನೋಡಬೇಡ ಹುಡುಗಿ
ನನ್ನ ಮನ ಕೆದಕಿದ
ಹೆಣ್ಣು ನೀನು.

ನೀ ಬರುವ ಮುನ್ನ

ಅದೇನೊ ಹುಚ್ಚು
...............Xyz
ಸೂರ್ಯ ಕಿರಣ
ಮರೆಯಾಗುವ ಮುನ್ನ
ನೀನು ಬಂದು
ಭುವಿಯನು ಸ್ಪರ್ಷಿಸಿದೆ.
ಅದೇಕೊ ನಾ ಕಾಣೆ
ಬಾಗಿಲೊಳು ನಿಂತು
ನಿನ್ನ ಬರುವಿಕೆಯ
ಆಗಮಿಸಿದೆ ಮಳೆರಾಯನೆ.

Monday, December 24, 2018

ಎತ್ತ ಪಯಣ

ತನ್ಮತೆಯ
ನೀರಲಿ
ಈಜೊಡೆವ
ಹಸಿರೆಲೆಯೆ 
ಎತ್ತ ನಿನ್ನೀ 
ಪಯಣ
ನಾ ಕರೆದರೂ
ಓ ಗೊಡದೆ
ಈಜೊಡೆವೆಯಾ?


Friday, December 21, 2018

ನೀರ ಹನಿ

ಎಲೆಯಲಿ ಜಾರಿದ
ನೀರ ಹನಿಯು ಹೇಳಿತು

ಮತ್ತೆ ಮತ್ತೆ
ನಿನ್ನ ಸ್ಪರ್ಷಿಸೋದು ಎಂತೊ

ಸ್ಪರ್ಷಿಸಿದ ಸುಖವ
ಮತ್ತೆ ಪಡೆಯೊದೆಂತೊ


ಏನೋ ಹುಚ್ಚು

ದಾರಿ ಕಾಣದ ಈ ಕಣ್ಣಿಗೆ
ಕಣ್ಣೀರ ಕಂಬನಿ ಸುರಿಸೋ ಹುಚ್ಚು.

ಪ್ರೀತಿ ಸಿಗದ ಈ ಹೃದಯಕೆ
ಹೃದಯದ ಪ್ರೇಮನ ಬಣ್ಣಿಸೊ ಹುಚ್ಚು

Tuesday, December 18, 2018

ಬರೆದಿಡುವ ಆಸೆ

ಓ........ನನ್ನ ನೆನಪುಗಳೇ, ಹೇಗೆ ಬರೆಯಲಿ ನಾನು ಈ ನನ್ನ ಮನದ ನೆನಪುಗಳು. ಗಾಳಿಗೆ ತೂರಿ ಹೋದ ಕಾಗದದಲಿ ಬರೆದಿಡುವ ಬಯಕೆ ನನ್ನದು. ಮತ್ತೆ ನನ್ನ ಬಳಿ ಸೇರಲು ಇಚ್ಚಿಸದ ಆ ಕಾಗದದಲಿ ನಾನೆಂದು ಬರೆದಿಡುವೆನೊ.
  ಕೇಳುವೆಯಾ ನೀನು ನಾ ಪಿಸುಗುಡುವ ದನಿಯಲಿ ಹೇಳುವ ಪ್ರತಿ ಮಾತಿನ ಮುತ್ತಗಳ ಸುರಿ ಮಳೆಯ ಆಲಿಸುವೆಯಾ?
   ಪ್ರಸಾದ್............🖍

ಮರೆಯಾದೆ ಜೊತೆಯಲ್ಲಿ

ಬಂತು ಬಂತು ಕೂಗುತ
ರೈಲು ಹಳಿಯಲ್ಲಿ
ನಿಂತೆ ನಿಂತೆ ಕಾಯುತ
ನಿಂತೆ ನಿಂತಲ್ಲಿ
ಮತ್ತೆ ನಿನ್ನೆ ನೋಡುತ
ಮರೆಯಾದೆ ಜೊತೆಯಲ್ಲಿ.

ಚಂದಿರ

ಬಿಳಿ ಮೋಡದ ಮರೆಯಲ್ಲಿ
ಮಲಗಿದ್ದ ಚಂದಿರಗೆ
ಬೆಳಕ ಚೆಲ್ಲು ಎಂದೆ|
ಬೆಳಕ ಚೆಲ್ಲಿ 
ಸುಮ್ಮನಿರದೆ ಅವನು
ಮತ್ತೆ ಮರೆಯಾದನು ಅಲ್ಲೆ|

Monday, December 17, 2018

ಸ್ನೇಹದ ಉಡುಗೊರೆ


ನೀ ಕೊಟ್ಟ ಉಡುಗೊರೆ 
ಮರೆಯಲ್ಲ ನಾನು
ಇದ ಮರೆತರೆ ನಾನು 
ನಿನ್ನ ಮರೆತೆ ಎಂದು.

Friday, December 14, 2018

ನೀ ಬರಲಿಲ್ಲ ಯಾಕೆ?

ಮತ್ತೆ ಬರೆಯೋಣ ಅಂದುಕೊಂಡೆ
ನಾ ಕಾದಿರಿಸಿದ ಜಾಗದಲಿ
ನೀ ಬರಲಿಲ್ಲ.

ಮನುಜ ಮಾಡಿದ ಪಾಪ

ಉತ್ತರು ಹೊಲದೊಳಗು
ಬಿತ್ತರು ಮಣ್ಣೊಳಗು
ಉತ್ತು ಬಿತ್ತು ಏರಿ ಹೊಡೆದರು
ಒಂದೆರಡು ಮಳೆ ಹನಿ ಬೀಳಲಿಲ್ಲ.

ಯಾವುದಿದು ಶಾಸ್ತ್ರ

ಆಚರಣೆಗೆ ಶಾಸ್ತ್ರ
ಹೇಳಿ ಆಡ್ಲಿಕೆ ಶಾಸ್ತ್ರ
ಶಾಸ್ತ್ರ ಶಾಸ್ತ್ರ ಅಂತ ಹೇಳಿ
ಹೆಣ್ಣಿಗೆ ಬಂಧಿಸಿತು 
ಆ ಶಾಸ್ತ್ರ.

ಮೊಬೈಲ್ ಬೇಕಂತೆ

ನಿದ್ದೆಗೆ ಜಾರುವ
ಮಗುವಿಗೆ 
ಮೊಬೈಲ್ ಬೇಕಂತೆ
ಜೋಗುಳವ 
ಹಾಡಲು ಅಮ್ಮನಿಲ್ಲವಂತೆ.

ಕಗ್ಗತ್ತಲಿನ ದಾರಿಯಲಿ ಬೆಳಕಾಗಿ ಬಾ

ಕತ್ತಲ ಕೋಣೆಯೊಳಗೆ
ಒಬ್ಬಂಟಿಯಾಗಿರಬೇಡ
ನಿನ್ನವನು ನಾನು
ನನ್ನೊಂದಿಗೆ ಇರು ನೀನು.

ನೀನಲ್ಲದ ಸನಿಹವು
ಮತ್ತೆ ಬಾರದೆ ನನ್ನ ಕಾಡದಿರಲಿ
ನೀ ಇರದ ಸನಿಹವು
ಕಗ್ಗತ್ತಲಿನ ದಾರಿಲಿ ಬೆಳಕಿಲ್ಲದಂತೆ.

ಎಲ್ಲಿರುವುದು ನೆಮ್ಮದಿ

ನಗು ಮೊಗದ ಮನೆಯೊಳಗೆ
ಹಿತವುಂಟು ಸುಖವುಂಟು
ನಗುವಿಲ್ಲದ ಮನೆ ಮನದೊಳು
ಎಲ್ಲಿರುವುದು ನೆಮ್ಮದಿ.

ಹೋದೆಯಾ?

ಮತ್ತೆ ಹೋದೆಯ ನೀನು
ನಾ ಕಾಲು ಚಾಚಿ ಕೂರಲು.

ಆಹ್ವಾನಿಸಿತು

ಮುದುಡಿದ ಮೈ ಮನಸಿಗೆ
ಸಂಜೆಯ ತಂಪು ಚಳಿಯು
ಬೆಂಕಿಯ ಬೇಗೆ ಸನಿಹ
ಆಮಂತ್ರಿಸಿ ಆಹ್ವಾನಿಸಿತು|


ದೀಪವನಿಡು

ಕತ್ತಲ ಕೂಪದಲಿ
ದೀಪವನಿಡು ಮನಸೇ
ಹೊರಗೊಂದು ಒಳಗೊಂದು 
ಮನಸಿನೊಳಗೊಂದು|

Wednesday, December 12, 2018

ನಂದು - ನಿಂದು ಸೆಲ್ಫಿ

ಮದವೆಯ ದಿಬ್ಬಣದಲಿ
ನನ್ನ ಅಕ್ಕನ ಮದುವೆಯಲಿ
ನಮ್ಮಿಬ್ಬರ ಜೊತೆಗೂಡಿಸುವ
ಒಂದು ನೆನಪಿನ ಸೆಲ್ಱಿ.

*********************************************
ಗೋಜಿಗೆ ಹೋಗದ
ಸೋಗಿನಲಿ
ನಳ ನಳಿಸಿ ತಳ ತಳಿಸುವ
ನಿನ್ನ ಗಾಗ್ರ ಜೊತೆ
ಹಾಗೊಂದು ಸೆಲ್ಫಿ.

*********************************************

ಅರಶಿಣ ಶಾಸ್ತ್ರದಲಿ
ಅರಶಿಣವ  ಕಲಸಿ
ಹಾಡಿನ ಶಾಸ್ತ್ರಕೆ 
ನೀ ನನ್ನ ಕರೆದು
ನನ್ನ ಸೆಲ್ಫಿ ನೀ ಸೆರೆ ಹಿಡಿದೆ.

ಸೆಲ್ಫಿ ತೆಗೆಯೋಣ ಬಾರೆ.

ಮನಸು ಕಾದಿರಿಸಿದ
ಮನದೊಳಗೆ........
             

ಸ್ವೀಟ್ ಸೆಲ್ಫಿ.......ವಿತ್ ರೇಶು.


ಸಾಗು ಹೋಗುಗಳ
ಬೀಗು ಸೇರುಗಳ
ಆಶಾಂತರಂಗದಲ್ಲಿ
ಬೀಗಿ ತೇಲಿಸುವ
ಸೆಲ್ಫಿ ಮೊಗದ
ಸುಂದರ
ಪ್ರತಿಕೃತಿಯ ಕೆತ್ತಿದ
ಮೊಬೈಲ್ ಕ್ಯಾಮಾರಾಗೆ
ನನ್ನ ಸಲ್ಯೂಟ್.

ಹೇಳು ನೀ

ಹಾಗೇನಿಲ್ಲ
ನಿನ್ನ
ಮನಸ್ಸಲ್ಲಿದ್ದರೆ
ಹೇಳು
ಒಂದು
ಮೆಸೇಜ್ ನಲ್ಲಿ
ಕ್ಲಿಯರ್
ಮಾಡುವೆ.........

Monday, December 10, 2018

ಮತ್ತೆ ಕಾಡೊ ಸಿಹಿ ಸವಿ ನೆನಪುಗಳು


ಅರಳು ಹುರಿದಂತೆ ಮಾಡಿದ ಮೊದಲ ಭಾಷಣ
ಗೆಳೆಯನ ಬ್ಯಾಗ್ ನಿಂದ ಕದ್ದ ಮೊದಲ ಪೆನ್ನು
ವ್ಯಾಕರಣ ಇಲ್ಲದ ಕಥೆಯ ಮೊದಲ ಸಾಲು
ಗೆರೆಯಲಿ ಬರೆದ ಮೊದಲ ರೇಖಾ ಚಿತ್ರ
ಹುಡುಗಿಗೆ ಬರೆದ ಮೊದಲ ಪ್ರೇಮ ಕವನ
ಗೋಡೆಯಲಿ ಬರೆದ ಮೊದಲ ಚಿತ್ರ
ಮನೆ ಶುಭ ಕಾರ್ಯದ ಮೊದಲ ಆಮಂತ್ರಣ ಪತ್ರಿಕೆ
ಬಾಲ್ಯದಲಿ ಹಾಕಿ ಎತ್ತಿಟ್ಟ ಚಿಕ್ಕ ಅಂಗಿ
ಅಂಗಿ ಕಿಸೆಯಲಿ ಇಟ್ಟ ಮೊದಲ ಪೆನ್ನು
ಮದುವೆ ಮನೆಯಲಿ ಕೊಟ್ಟ ಮೊದಲ ಉಂಗುರ
ಕಷ್ಟ ಪಟ್ಟು ಮಾಡಿದ ಮೊದಲ ಕೆಲಸ
ಇಷ್ಟ ಪಟ್ಟು ತಗೊಂಡ ಮೊದಲ ನೋಕಿಯಾ ಮೊಬೈಲ್
ಪೇಪರ್ ನಲ್ಲಿ ಮಾಡಿದ ಮದುವೆ ಮನೆ ಡಿಸೈನ್
ಮುಖದಲಿ ಮೂಡಿದ ಮೊದ ಮೊದಲ ಮೊಡವೆ
ನನ್ನನ್ನು ಇಷ್ಟ ಪಟ್ಟ ಆ ಹುಡುಗಿ.
ಪ್ರಸಾದ್.......🖍

ತಬ್ಬಿ ಹಿಡಿದಾಗ


ನನ್ನ ರಥದಲಿ ನೀ ಕೂತು
ನನ್ನ ತಬ್ಬಿ ಹಿಡಿದಾಗ
ನನ್ನ ರಥವು ಓಣಿ ಸೇರಿತು...!!

ಹೀಗ್ಯಾಕೆ?

ಹೇ ಹೂವೆ 
ನಿನ್ನ ಹೆಸರು ಬರೆಯುವ ಮುನ್ನ
ನೀ
ಹೀಗ್ಯಾಕೆ ತಿರುಗುವೆ.

Sunday, December 9, 2018

ಆಹಾ......ಚಂದ್ರಮನೆ

ಆಹಾ......ಚಂದ್ರಮನೆ
ನನ್ನ ಹಡುಗಿಯ
ಸೀರೆ ಸೆರಗ ಅಂಚಲಿ
ಬಚ್ಚಿಟ್ಟು ಕೂತು
ಕಳ್ಳ ನಗೆ ಬೀರುವೆಯಾ?

ಆಹಾ.......ಚಂದ್ರಮನೆ
ನನ್ನ ಹುಡುಗಿಯ
ಹಣೆಯ ಬಿಂದಿಗೆಯಲಿ
ಬೆಳಕ ಚೆಲ್ಲಿ
ಅವಳಂದ ಹೆಚ್ಚಿಸುವೆಯಾ?

ಆಹಾ....... ಚಂದ್ರಮನೆ
ನನ್ನ ಹುಡುಗಿಯ
ಕಮಲ ಕಣ್ಣಿನ ಕಾಡಿಗೆಯಲಿ
ಬೀದಿಗೆ ಶಶಿಯಂತೆ
ನೀನು ಇಣುಕುವೆಯಾ?

ಸೂರ್ಯ

ಜಗದ ಉದ್ದಗಲಕೂ
ಹರಡಿದ ಈ ದೀಪಕೆ
ಎಣ್ಣೆ ಏತಕೆ?

ಬೆಂಕಿಯಂತೆ ಸುಡೊ
ಉರಿಯೋ ಜ್ವಾಲೆಗೆ
ಬತ್ತಿ ಏತಕೆ?

ನಂದಿಸಲಾಗದ
ಕಿರಣ ಜ್ಯೋತಿಗೆ
ಹಣತೆ ಏತಕೆ?

ನಾ ಹೇಳ ಬಯಸಿದ್ದು 2

1. ಮೌನದ ಮಾತುಗಾರನಿಗೆ ತಟ್ಟಿ ಮಾತಾಡಬೇಡ.
2. ಗಂಡು ಹೆಣ್ಣಿನ ಪ್ರೇಮ ಸಾಕ್ಷಿಗೆ ಆಳ ಪ್ರೀತಿಯೆ ಸಾಕ್ಷಿ.
3. ಕನಸು ಮುರಿದ ಮಾತ್ರಕೆ ಮನಸು ಕೆಡಿಸಿಕೊಳ್ಳಬೇಡ.

ಅಲ್ಲಿ ಇಲ್ಲಿ ಸಿಕ್ಕಿದ್ದು

1. ಪ್ರೀತಿ ಕಾಣಲ್ಲ ನಿಜ, ಪ್ರೀತ್ಸೋರು ಕಾಣಲ್ವ.
2. ಮುತ್ತು ಕೊಡೋಳು ಬಂದಾಗ, ತುತ್ತು ಕೊಟ್ಟೋಳ ಮರಿಬೇಡ.

ನಾನು ಹೇಳ ಬಯಸಿದ್ದು

1. ಕನಸು ಕಟ್ಟಿ ಓಡೊ ಛಲಗಾರನಿಗೆ, ಅವನ ಕನಸುಗಳೆ ಇಂಧನ.
2. ಹೊಳೆವ ಕನ್ನಡಿಗೆ ಒಂದೆ ಬಿಂಬ, ಒಡೆದು ಚೂರದ ಕನ್ನಡಿಗೆ ಹಲವು ಬಿಂಬ.
3. ಕಸಿದ ಪ್ರೀತಿಗೆ ಕಸುತಿ ಹಾಕಿ ನೋಡ, ಆಗ ಹೊಸತು ನೋಡ.


ಕೊಳಕ

ತೂತು ಜೋಳಿಗೆಗೆ
ತೇದು ಜೋಡಿಸುವ
ಗಲೀಜು ಕೊಳಕನೆ
ಎಲ್ಲಿ ನಿನ್ನ ಪಯಣ|

ನನ್ನ ಪರಿಮಳ

ಪಾರಿಜಾತ ಪಾರಿವಾಳವೆ
ಘಮ ಘಮಿಸುವ
ಆ ನನ್ನ ಪರಿಮಳಗೆ
ನನ್ನ ನಿವೇದನೆ ತಿಳಿಸು

ಹರೆಯದ ವಯಸ್ಸು

ಹರೆಯದ ವಯಸಿಗೆ
ಹಾರುವ ಕನಸು|

ಹಾರಿದ ಕನಸಿಗೆ
ಜಿಗಿಯುವ ಮನಸು|

ಜಿಗಿಯುವ ಮನಸಿಗೆ
ಅದುವೆ ಹುರುಪು||


ಸಾಕ್ಷಿ

ಸಂಭ್ರಮದ ಸಂಭ್ರಮಕೆ
ಮದುವೆಯು ಸಾಕ್ಷಿ||

ನಿನ್ನ ನೋಡಿದ
ಈ ನನ್ನ ಕಣ್ಣಿಗೆ
ಅರಳಿದ ನಿನ್ನ
ನಯನಗಳೆ ಸಾಕ್ಷಿ||

ಬೇಕಂತೆ

ಕುರುಬನ ರಾಣಿ
ಮಗಳ ಮದುವೆಯಂತೆ
ಸಿದ್ಧತೆಗೆ ಅದೇನೊ
ಬೇಕಂತೆ.........!!!!

ಸಂಜೆ ಕಳೆದು ಕತ್ತಲು ಕವಿಯುತಿದೆ

ಮಣಗುಡುವ ಮಾತಿಗೆ
ಆ ಸಂಜೆ ಹೊತ್ತಿಗೆ
ಎತ್ತಲೊ ನಡೆಸಿದ
ನನ್ನ ಬದುಕು
ಮತ್ತೆ ಮನೆ ಸೇರುತಿದೆ||

Saturday, December 8, 2018

ಕಳೆದು ಹೋದ ಮೋಜಿನ ದಿನಗಳು

      ಹೀಗೆ ಬರೆಯೋವಾಗ ಒಂದು ನೆನ್ಪಾಯ್ತು.
ಏನಂದ್ರೆ......ನಾವು ಬೆಳಿತಾ....ಬೆಳಿತಾ ಇದ್ದಾಗೆ, ನಮ್ಗೆ ಆಸೆ, ಕನಸುಗಳು ಅಂತ ಹುಟ್ಕೊಳ್ಳಿಕ್ಕೆ ಶುರುವಾಗುತ್ತೆ. ಅದೇ, ನಾವು ಚಿಕ್ಕವರಿದ್ದಾಗ ಇದ್ಯಾವುದು ನಮ್ಗೆ ಗೊತ್ತಿರಲ್ಲ. ಆಸೆಗಳು ಯಾವುದು? ಕನಸುಗಳು ಯಾವುದು? ಗುರಿ ಯಾವುದು? ಅಂತಾನೆ ಗೊತ್ತಿರಲ್ಲ. ಹಾಗೆ ಮನಸ್ಸಿಗೆ ಬಂದಾಗೆ ಇರ್ತಿವಿ, ಖುಷಿ ಪಡ್ತಿವಿ, ನಗ್ತೀವಿ, ಹಾರಾಡ್ತಿವಿ, ಚೀರಾಡ್ತಿವಿ, ಒಟ್ಟಿಗೆ ಇದ್ದು ಒಂದೆ ತಟ್ಟೇಲಿ ಊಟ ಮಾಡಿ ಒಂದೆ ಬಟ್ಟೆ ಹಾಕೊಳ್ತಿವಿ. ಮತ್ತೆ  ಒಬ್ಬರಿಗೊಬ್ರು  ಸಹಾಯ ಅಂತ ಮಾಡ್ತಿವಿ. ಅದು ಆಟದಲ್ಲಿರಬಹುದು, ಪಾಠದಲ್ಲಿರಬಹುದು, ಸ್ನೇಹದಲ್ಲಿರಬಹುದು ಹೀಗೆ ಯಾವ ರೀತಿಯಲ್ಲಾದ್ರು ಆಗ್ಬಹುದು ಹೀಗೆ ಆಡ್ತಾ...ಆಡ್ತಾನೆ ಬೆಳೀತಿವಿ, ದೊಡ್ಡವರಾಗ್ತೀವಿ.
       ಅದೇ ನಾವು ಈಗ ಹಿಂದಿದೆಲ್ಲ ಸುಮ್ನೆ ಕೂತು ನೆನಪು ಮಾಡ್ಕೊಳ್ತಾಯಿದ್ರೆ ಒಳಗೊಳಗೆ ಏನೊ ಒಂದು ಖುಷಿ, ಆ ಖುಷಿಯ ಮಜಾನೆ ಬೇರೆ. ನೆನೆದು ಮುಗಳ್ನಗೋದೇನು, ಯಾರದ್ರು ಹಳೆ ದೋಸ್ತಿಗಳು ಸಿಕ್ರೆ ನೆನಪು ಮಾಡ್ಕೊಂಡು, ನಕ್ಕೊಂಡು, ತಮಾಷೆ ಮಾಡ್ಕೊಂಡು ಹಳೆ ನೆನಪುಗಳನ್ನ ಕೆದುಕೋದೆ ಒಂದ್ ಖುಷಿ.
        ಆ ಬಾಲ್ಯದ ದಿನಗಳೆ ಎಷ್ಟು ಚೆನ್ನ ಅಲ್ವಾ? ಆ ದೇವರೇನಾದ್ರು ಆ ಬಾಲ್ಯದ ದಿನಗಳನ್ನ ಮತ್ತೆ ಕೊಟ್ಬಿಟ್ರೆ ಹೇಗಿರುತ್ತೆ.
        ನೆನೆಸ್ಕೊಳ್ತಾಯಿದ್ರೆ ಹಾಗೆ ನೆನೆಸ್ಕೊಳ್ತಾ ತೇಲೋಣ ಅನ್ಸುತ್ತೆ.
        ಹಾಂ ಮತ್ತೆ ಈವಾಗ ನೆನ್ಪಾಯ್ತು ನೋಡಿ!
ಶಾಲೆಗೆ ಹೋಗುವಾಗ ತುಂಬ ತುಂಟಾಟಗಳನ್ನ ಮಾಡ್ತಾ ಹೋಗ್ತಿದ್ವಿ. ಒಬ್ಬರಿಗೊಬ್ರು ಚಾಡಿ ಹೇಳೋದು, ಶಾಲೆಲಿ ಕೊಟ್ಟ ಹೋಂ ವರ್ಕ್ ಬಗ್ಗೆ ಮಾತಾಡ್ತಾ ಮಾತಾಡ್ತಾ...ನಾಲ್ಕೈದು ಗುಂಪಿನ ಮೆರವಣಿಗೆ ಹೋಗ್ತಿರೊ ಹಾಗೆ ಶಾಲೆಗೆ ಹೋಗ್ತಿದ್ವಿ. ದಾರಿಲಿ ಏನಾದ್ರು ಮಾಸ್ಟರ್ ಸಿಕ್ರೆ ಎದುರುಗಡೆಯಿಂದೆ ನಮಸ್ತೆ ಕೊಟ್ಟು ಹಿಂದೆಯಿಂದ ಬಾಯಿಗೆ ಬಂದ ಹಾಗೆ ಬಯ್ತಾಯಿದ್ವಿ. ಪಾಪ ಮಾಸ್ಟರ್... ಮಾಡದೆ ಇರುವ ತಪ್ಪಿಗೆ, ಪಾಠ ಮಾಡಿದ ತಪ್ಪಿಗೆ ನಮ್ಮ ಬಯ್ಯುಗುಳ ಅಂತು ಬೀಳ್ತಿತ್ತು. ನಿಜವಾಗ್ಲು ಈ ನಮ್ ಬಯುಗುಳ ಕೇಳಿದ್ರೆ T C ಕೊಡೋದಂತು ಗ್ಯಾರೆಂಟಿ. ಇಲ್ಲ ಅಪ್ಪ ಅಮ್ಮನ್ನ ಬರೋಕೆ ಅಂತು ಹೇಳ್ತಿದ್ರು. ಸುಮ್ನೆ ಸುಮ್ನೆ ರಜೆ ಮಾಡಿ ಹೊಟ್ಟೆ ನೋವು, ಅಲ್ಲಿ ನೋವು- ಇಲ್ಲಿ ನೋವು ಅಂತ ಹೇಳಿ ರಜಾ ಅರ್ಜಿ ಗೀಚಿ ಟೀಚರ್ ಕೈಲಿ ಕೊಟ್ಟು ಸಿಕ್ಕಿಬಿದ್ರೆ ಅವನ ಪಜೀತಿ ಹೇಳೋಕಾಗಲ್ಲ ಆ ದೇವರಿಗೆ ಗೊತ್ತು.
        ಗಣಿತ ಅಂತ ಬಂದಾಗ ಇದ್ಯಾಕ್ ಬೇಕಿತ್ತಪ್ಪಾ ಅಂದ್ಕೊಂಡು ಗೊಣಗ್ತಿವಿ. ಲೆಕ್ಕದಲ್ಲಂತು ಪಕ್ಕ 0 (ಝೀರೊ).
ಟೀಚರ್ ಲೆಕ್ಕಕ್ಕೆ ಅಂತ ಬಂದಾಗ ನಾವು ಪಕ್ಕಕ್ಕೆ ಹೋಗ್ತಿದ್ವಿ.
ನಮಗೆ ಲೆಕ್ಕ- ಪಕ್ಕ ಅನ್ನೋದು ಮೊದ್ಲೆ ಗೊತ್ತಿಲ್ಲ ಅದ್ರಲ್ಲಿ ಟೀಚರ್ ದೆ  ಬೇರೆ. ಹೀಗೆ ಮನಸ್ಸಲ್ಲಿ ಗೊಣಗ್ತಾ ಬಯ್ಯೋದು. ಈ ಬಯ್ಯೋ ಬುದ್ಧಿ ಸ್ವಲ್ಪ ದೊಡ್ಡೋರಾಗ್ತನೆ ನಮ್ ಜೊತೆ ಬಂದ್ಬಿಡುತ್ತೆ.
        ಈವಾಗ ಅನ್ಸುತ್ತೆ ಆವತ್ತು ಸರಿಯಾಗಿ ಶಾಲೆಗೆ ಹೋಗಿದ್ರೆ, ಅಥವಾ ಶಾಲೇಲಿ ಪಾಠನ ಚೆನ್ನಾಗಿ ಓದಿದ್ರೆ ಹೀಗಾ ಇರ್ತಿದ್ವಿ ಅಂತ ಯೋಚಿಸ್ತಿವಿ. ಇಲ್ಲ ನಮ್ ಫ್ರೆಂಡ್ಸು ಯಾರದ್ರು ಚೆನ್ನಾಗಿ ಓದಿ ಒಳ್ಳೆ ಕೆಲ್ಸದಲ್ಲಿದ್ರೆ ಅವನ ನೋಡಿನು ಒಮ್ಮೊಮ್ಮೆ ನಾವು ಅಂದ್ಕೋಳ್ತಿವಿ ಅಲ್ವಾ. ಏನ್ಮಾಡೋದು ಆ ಬಾಲ್ಯವೆ ಹಂತದ್ದು, ಆ ವಯಸ್ಸೆ ಹಂತದ್ದು ಆಟ ಆಡೊ ಸಮಯಕ್ಕೆ ಆಟ ಆಡಿ, ಪಾಠ ಓದೊ ಸಮಯಕ್ಕು ಆಟ ಆಡಿ ಈಗ ನಮ್ಗೆ ನಾವೆ ಬಯ್ಕೊಂಡು ತೆಪ್ಪಗಿರ್ತಿವಿ ಅಲ್ವಾ. ನಮ್ ಕೈಲಿ ಮಾಡೋಕಾಗೋದಂತು ಈವಾಗ ಇಷ್ಟೆ ಇನ್ನೇನು ಮಾಡೋದು.
     ಅದೇನೋ ಹೇಳ್ತರಲ್ಲ ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಫಲವೇನು? ಹಾಗಾಯ್ತು ನೋಡಿ.
      ನೆನೆಸ್ಕೊಳ್ತಾ......ನೆನೆಸ್ಕೊಳ್ತಾ.......ಬರೀತಾ......ಬರೀತಾ ಎಲ್ಲಿ ಹೋಯ್ತು ನೋಡಿ. ಮುಗಿಸ್ಲಿಕೆ ಮನಸ್ಸು ಬರ್ತಾ ಇಲ್ಲ, ಬರೆದು ಹೇಳಿಕೆ ನೆನಪಾಗ್ತ ಇಲ್ಲ.

ಸರಿ ಬಾಯ್......ಮತ್ತೆ ಸಿಗೋಣ.
ಪ್ರಸಾದ್🖍

ನೀವು ಬರೀರಿ.......ನಿಮ್ಮ ನೆನಪುಗಳೇನಾದ್ರು ಇದ್ರೆ.....

ಶಾಲಾ ದಿನಗಳ ತುಂಟಾಟಗಳನ್ನ, ಅಥವಾ ತಂಗಿಗೆ ತಮ್ಮಂಗೆ ಅಂತ ಅಮ್ಮ ಕೊಟ್ಟ ತಿಂಡಿನಾ ಕಿತ್ತು ತಿಂದಿದ್ದು, ಜಾತ್ರೆಗೆ ಹೋಗಿ ಚಪ್ಪಲಿ ಬಿಟ್ ಬಂದು ಅತ್ತಿದ್ದು, ಮನೇಲಿ ಸಕ್ಕರೆ ಹುಳಿ ಕದ್ದು ತಿನ್ನೋವಾಗ ತಂಗಿ ಬಾಗಿಲು ಎಳೆದು ಚಿಲಕ ಹಾಕಿದ್ದು. ತೆಂಗಿನ ಹೆಡೆಯಲಿ ಕೂರಿಸಿ ಗಾಡಿ ಮಾಡಿ ಎಳೆದದ್ದು. ನೀರಿನ ಮಡಕೆ ಒಡೆದು ನಾನಲ್ಲ ಅಂತ ಹೇಳಿ ತಪ್ಪಿಸಿಕೊಂಡಿದ್ದು. ನಂದು ಬಟ್ಟೆ ನಾನೆ ಒಗಿತೇನೆ ಅಂತ ಹೇಳಿ ಅರ್ಧ ಕಡಪನ ನೀರು ಎತ್ತಿದ್ದು. ಕೂತಲ್ಲೆ ಸುಮ್ನೆ ಕೊರೋಕೆ ಆಗದೆ ತಂಗಿ ಬೆನ್ನಿಗೆ ಚಟಾರ್ ಅಂತ ಎರಡು ಬಿಟ್ಟಿದ್ದು. ಬೆಕ್ಕಿಗೆ ಬಾವಿಗೆ ಹಾಕಿ ಮೋಜು ನೋಡಿದ್ದು. ದೇವರಿಗೆ ಇಟ್ಟ ಶೀರನ ಯಾರಿಗು ಗೊತ್ತಾಗದೆ ಕೈ ಹಾಕಿ ತಿಂದಿದ್ದು. ಅಜ್ಜನ ಬೋಳು ಮಂಡೆಗೆ ಬೂದಿ ಮೆತ್ತಿದ್ದು.
     ಹೀಗೆ ಹೇಳ್ತಾ ಹೋದ್ರೆ ಒಂದಾ ಎರಡಾ ಹೇಳಿಕೆ ಸಮಯ ಸಾಲಲ್ವೇನೊ, ಸಮಯ ಏನು? ದಿನ, ವಾರವೆ ಸಾಕಾಗಲ್ಲ, ಅಷ್ಟು ಇದೆ. ಆ ಸವಿ ಸವಿ ನೆನಪುಗಳು ಕಳೆದು ಹೋಗಿ ಮತ್ತೆ ಬಾರದ ಆ ದಿನಗಳು.
  ಮತ್ತೆ ಪನ್ಹ ಬಾಯ್.........ಮತ್ತೆ ಸಿಗೋಣ.

Friday, December 7, 2018

ಪೂರ್ಣವಿರಾಮ

ಖಾಲಿ ಹಾಳೆಯಲಿ
ನಿನ್ನ ನೆನಪಲಿ
ಗೀಚುವ ಆ ನೆನಪಿಗೆ
ಇಗೊ ನೋಡು
ಪೂರ್ಣ ವಿರಾಮ ಇಟ್ಟೆ

ರಸಿಕ

ತಂಪು ತಂಪು ಗಾಳಿಗೆ
ಮೈ ಒಡ್ಡೊ
ಪ್ರೇಮದ ರಸಿಕ ನಾನು


ಪ್ರೀತಿಯ ನಶೆ


ಮಳೆ ಬಂದಂತೆ
ನೀನು ನೆನಪಾದರೆ
ಪ್ರೀತಿಯ ನಶೆಯಲಿ
ಮಳೆಯಲಿ ನೆನೆದಂತೆ|

ಮಳೆ ಹನಿ ಶಬ್ಧ

ನನ್ನ ಮನೆಯ
ಅಂಗಳದಲಿ
ಮರ ಉದುರಿಸಿದ
ತರಗೆಲೆಯಲಿ
ಮಳೆಯ ನೀರ
ಬಿಂದುವಿನ ಶಬ್ಧ
ಪಟ್....ಪಟ್......ಪಟ್

ಸಂಜೆ ಸಮಯದ ಮಳೆ

ಜಗದ ದಾಹ ತಣಿಸುವ
ಓ ಮಳೆಯೆ
ಸಂಜೆಯಲ್ಲದ ಸಮಯದಲಿ
ಕಡು ಕಗ್ಗತ್ತಲಿನ ಹೊತ್ತಲಿ
ಮೋಡ ಮುಸುಕಿದ ಗಳಿಗೆಯಲಿ
ಭುವಿಗೆ ಬಂದಿಳಿದೆ


ನನ್ನ ಹಂಸವರ್ಷಿಣಿ

ಹೇ ಹಂಸವರ್ಷಿಣಿಯೆ
ನೀನೊಮ್ಮೆ ಬಂದು ನೋಡು
ಮನೆಯ ಚಾವಣಿಯ
ಮುದ್ದು ಮಳೆ
ಹನಿಯ ಸಾಲುಗಳ
ಅಂದ ನೋಡು
ಹೇಗೆ ತೋರುತಿಹುದು
ನಮ್ಮಿಬ್ಬರ ಪ್ರೀತಿ ಬೆಳಕಲಿ


ಬಾ ಮಳೆಯೆ

ಬಾ ಮಳೆಯೆ
ಬಂದು ಹೋಗು
ನಿನ್ನ ಖುಷಿಯನು
ಈ ಜಗಕೆ ತೋರಿಸು
ಭುವಿ ತಂಪಾಗಿಸೊ
ಹೊನ್ನ ಮಳೆಯೆ
ಮನವ ಕುಣಿಸೊ
ಮುತ್ತು ಹನಿಯೆ
ನಿಲ್ಲ ಬೇಡ ನೀನು
ಧರೆಗೆ ಬಂದು
ದಾಹ ತಣಿಸಿ
ನಿನ್ನವಳ ಸನಿಹ ಸೇರೂ
ಪ್ರತಿ ಸಂಜೆ
ಸಮಯ ಕಾಯುವ
ಆ ನಿನ್ನ
ಹೃದಯ ಒಡತಿಗೆ
ನೀನು ಸನಿಹವೆ ಇರು.


Thursday, December 6, 2018

ಟೈಂ ಪಾಸ್ ದಿನಗಳು

ಹರೆಯದ ವಯಸ್ಸೆ ಹಾಗೆ.........
ಅಲ್ಲಿ ಏನೊ ಹುಚ್ಚು, ಆ ಹುಚ್ಚು ಮನಸಿಗೆ ಲಗಾಮೆ ಇರೋದಿಲ್ಲ. ಅಲ್ಲಿಂದಿಷ್ಟು ಖುಷಿ, ಆ ಖುಷಿಯೊಳಗೊಂದು ಮತ್ತೊಂದಿಷ್ಟು ಸ್ನೇಹಿತರು. ಸ್ನೇಹಿತರೊಡಗೂಡಿ ಮಾಡಿದ ಅದೆಷ್ಟೊ ಮೋಜು ಮಸ್ತಿಗಳು, ಕನಸು ಕಾಣದೆ ಕಾಣೊ ಅದೆಷ್ಟೊ ಅರ್ಥವಿಲ್ಲದ ಹುಚ್ಚು ಕನಸುಗಳು. ಆ ಕಡೆಗೊಂದು ಈ ಕಡೆಗೊಂದು ಸ್ನೇಹಿತರ ಹೆಗಲ ಮೇಲೆ ಕೈ ಹಾಕಿ ಸಾಲು ಹೆಜ್ಜೆ ಹಾಕಿ ಶಿಳ್ಳೆ ಹೊಡಿತಾ.ಕೇ ಕೇ ಹಾಕಿ ನಕ್ಕೊಂಡು ಟೈಂ ಪಾಸ್ ಮಾಡಿದ ಆ ದಿನಗಳ ಮರೆಯಲು ಸಾಧ್ಯನಾ?
ನೆನಪಿನೊಂದಿಗೆ.......ಪ್ರಸಾದ್🖍
     
                        ಮತ್ತೆ ಸಿಗೋಣ

ಹರೆಯದಲಿ ಸಹಜ

ಹರೆಯದ ಹೆಣ್ಣೊಂದು
ನನ್ನೆದುರು ನಿಂತಾಗ 
ನನ್ನ ಹೃದಯದಲಿ ಯಾಕೊ
ಡವ ಡವ.........
ಹರೆಯದ ವಯಸಲಿ
ಇಂತದೆಲ್ಲ ಸಹಜ
ನನ್ನ ಮನಸಲಿ ಯಾಕೊ
ತಳ ಮಳ.........

ಮರೆಯಾಯಿತು

ನೀಲಾಗಾಸದಲಿ
ಬರೆದಿಟ್ಟ ಚುಕ್ಕಿಯು
ಮಿಂಚಂತೆ 
ಮೋಡದಲಿ ಮರೆಯಾಯಿತು|

ನಿನ್ನ ಕವನ

ನಿನ್ನ ಕೈ ಬಳೆಯ ಸದ್ದು
ನನ್ನೆದೆಗೆ ಕೈ ಬೀಸಿ ಕರೆಯಿತು|

                             💝💝💝💝

ಹಸಿರು ಗಾಜಿನ ಬಳೆಗಳೆ
ಕೈ ಶೃಂಗಾರದ ಬಳೆಗಳೆ|

🌸🌸🌸🌸🌸🌸🌸🌸🌸🌸🌸🌸🌸🌸🌸🌸🌸🌸🌸

🌹
ಈ ಹೂವಲಿ ನಿನ್ನಂದವ ಕಂಡು
ಈ ಹೂವಿಗೆ ಮುತ್ತಿಟ್ಟ
......ರಸಿಕ ನಾನು.....

🌸🌸🌸🌸🌸🌸🌸🌸🌸🌸🌸🌸🌸🌸🌸🌸🌸🌸🌸


ಸೆಳೆತದ ಸೆರೆಯಲಿ
ಬಂಧಿಯಾದ ಬಂಗಾರದ
ಈ ಮೀನಿಗೆ
ಬಲೆಯ ಬೀಸಿ
ಮತ್ತೆ ಸೆರೆ ಹಿಡಿವಳು ಯಾರೊ?!!!

🌸🌸🌸🌸🌸🌸🌸🌸🌸🌸🌸🌸🌸🌸🌸🌸🌸🌸🌸

ಉದ್ದ ಜಡೆಯ
ಮಿಂಚು ಓಲೆಯ
 ಧರಿಸಿ ನಿಂತವಳೆ!!!


ನೀನ್ಯಾರೆ  ಹೇಳೆ?

🌸🌸🌸🌸🌸🌸🌸🌸🌸🌸🌸🌸🌸🌸🌸🌸🌸🌸🌸


ನಿನಗಾಗಿ ಬರೆದ
ಪ್ರೇಮ ಪತ್ರದಲಿ
ಗೀಚಿ ಬರೆದದ್ದು....!!


ಖಾಲಿ ನನ್ನ ವಿಳಾಸ

🌸🌸🌸🌸🌸🌸🌸🌸🌸🌸🌸🌸🌸🌸🌸🌸🌸🌸🌸

ಮತ್ತೆ ನೆನಪಾಗಿ💚💚💚💚💚💚ಪ್ರೀತಿಯಲಿ.....
ಪ್ರಸಾದ್🖍


Wednesday, December 5, 2018

ಮುಡಿಸುವೆ

ನನ್ನ ಮನೆಯಂಗಳದ
ಹೂವಲಿ
ನಿನ್ನಂದದ ಚೆಲುವನು ಕಂಡೆ|
ಕಂಪು ಸೂಸುವ ಕೆಂಪು
 ಹೂವೆ
ನಿನ್ನ ಹೆಸರ ಹೇಳು|
ನನ್ನ ಪ್ರೇಮದ ನಲ್ಲೆಗೆ
ಮುಡಿಸಿ
ನಿನ್ನ ಸೊಬಗ ಹೆಚ್ಚಿಸುವೆ|


Tuesday, December 4, 2018

ರಗಳೆ

ಓ ಮಳೆಯೆ
ಏನು ನಿನ್ನ 
ರಗಳೆ......
ಹೋದೆಯಾ ಎಂದರೆ
ಮತ್ತೆ ಬಂದೆಯಾ? 
ನೀನು....


Thursday, November 29, 2018

ಸ್ನೇಹ ಅಮರ

ಓ.....ನನ್ನ ಗೆಳೆಯನೆ,
ನಾನೊಬ್ಬಳು ಹೆಣ್ಣು...ಹೆಣ್ಣೆಂದರೆ ಯಾಕೆ ಈ ಜಗಕೆ ಅಸೂಯೆ. ನನ್ನ ಮನದ ನೋವನು ಯಾರ ಬಳಿ ಹೇಳಲಿ? ಈ ಜಗದ ಉದ್ದಗಲಕ್ಕೂ ಹರಡಿದ ಈ ಮಣ್ಣ ರಾಶಿಗೊ, ಇಗೊ ನೋಡು ನನ್ನ ಕಣ್ಮುಂದೆ, ಕಣ್ತಪ್ಪಿಸಿ ಬೀಸೊ ಈ ಗಾಳಿ ಮುಂದೆ ಅಳಲು ತೋಡಿ ಕೊಳ್ಳಲೆ, ನೀನು ಬೆರಳು ತೋರಿಸಿ ಹೇಳೊ ಈ ಜನಕೆ ಮತ್ತೆ ಹೇಳಲೆ......ಹೇಳು ಗೆಳೆಯನೆ.
ಈ ಕಣ್ಣ ನೀರ ಹನಿಗಳು ಬತ್ತಿ ಇಂಗೊ ತನಕ ನನ್ನಿ ಮನದ ನೋವಿಗಾದರು ಮುಕ್ತಿ ಸಿಗುವದೇ ಹೇಳು ನೀ.
ಯಾಕೆ? ಮೌನವಾದೆ...... ನನ್ನ ಒಡಲ ಕೂಗಿ ಹೇಳೊ ಧನಿ ನಿನಗೆ ಕೇಳಲಿಲ್ಲವೆ. ನನ್ನ ಅಂತರಂಗದ ಕೊರಗು ನಿನಗೆ ಅರ್ಥವಾಗದೆ...ಹೇಳು ನೀ.
ನನ್ನ ಸ್ನೇಹಕೆ ಕೈ ಚಾಚಿ ಕರೆವ ಆ ನಿನ್ನ ಕೈ ಗಳು.....ಕಟ್ಟಿ ಹೋಯಿತೆ. ಮತ್ತೆ ಮತ್ತೆ ಗಂಟಲು ಹರಿದು ಬಿರಿಯುವ ಆ ನನ್ನ ನೋವಿಗೆ ನಿನ್ನ ಮನಸು ಕುಗ್ಗಿತೆ.... ಹೇಳು ಸ್ನೇಹಿತ.
ನಾನು ನಿನ್ನ ಪಾದಕೆ ಕಣ್ಣೀರಿಡುವೆ ....ನಿನ್ನ ನನ್ನ ಈ ಗೆಳೆತನಕೆ ಸಮಾಜ ಮಸಿ ಬಳಿಯುವ ಹೊತ್ತಲ್ಲಿ ನೀನು ಯಾಕೆ ಮೌನವಾದೆ?
ಸ್ನೇಹವನು ಉಳಿಸಿಕೊ.... ಗೆಳೆಯನೆ ಮತ್ತೆ ಕೈ ಮುಗಿದು ಕೇಳುವೆ, ನೀ  ಹೀಗೆ ಮೌನವಾಗಿ ಕೈ ಹೊತ್ತು ಕೂರಬೇಡ.
ಪ್ರಸಾದ್......🖍

ನಿನಗಾಗಿ ಬರೆದೆ

ನಿನಗಾಗಿ ಬರೆದ
ಖಾಲಿ ಹಾಳೆಯ
ಪದಗಳು....!
ನಾಚಿ ನೀರಾಗಿ
ನದಿಯಾಗಿ ಹರಿದು
ನನ್ನೀ ಹೃದಯ
ಸೇರಿ....!
ನಮ್ಮಿಬ್ಬರ ಪ್ರೀತಿಗೆ
ನೀರೆರೆಯಿತು ಗೆಳತಿ
ನೋಡು....!

ನನ್ನ ನಗಿಸಿ ನೀನು


ಮನಸು ಮಾತಿನ ಮಾತು ಕೇಳಿ
ಹಗಲು ಗನಸಿನ ಚಿತ್ರವು ನೋಡಿ
ಮೋಜು ಮಾತಿಗೆ ಮಾತು ಬೆಳೆಸಿ
ನನ್ನ ನಗಿಸಿದೆ ನೀನು......!!!

ಅಳಿಸಿದೆ

ನಡೆದ ಮರಳಿನ ಮೇಲೆ
ಹೆಜ್ಜೆ ಗುರುತಾಗಿ
ಗೋಗರೆದು ಬಂದ ಅಲೆಯು
ಅಳಿಸಿ ಹಾಕಿತು.

ರಾತ್ರಿಯಲಿ

ಸನಿಹ ಸೇರೊ ರಾತ್ರಿಯಲಿ
ಬೆಚ್ಚನೆ ಮಲಗೊ ಹೊತ್ತಿನಲಿ
ಕನಸ ಕನವರಿಕೆ ಬಾಯಲಿ


Tuesday, November 27, 2018

ಹೀಗೊಂದು ಸಲ ಆಸರೆಯಾಗು ನೀ

ಅದ್ಯಾಕೊ ಗೊತ್ತಿಲ್ಲ
ಎಂದೊ ಗೀಚಿ ಬರೆದ 
ಖಾಲಿ ಹಾಳೆಯ ಸಾಲುಗಳು 
ಮತ್ತೆ ನೋಡೊ ಆಸೆಯಾಗಿ 
ಮತ್ತೆ ಮತ್ತೆ ಮುತ್ತಿಟ್ಟು 
ಎದೆಗಪ್ಪಿ ಹಿಡಿದು ಭಾವನೆಯ 
ಅಕ್ಷರಗಳ ಮೇಲೆ ಮುತ್ತಿನ 
ಕಣ್ಣೀರ ಸುರಿಸಿ ಆ ನೆನಪಿನ 
ಕಣ್ಣೀರ ಹನಿಯು ಬೆರಳಲಿ 
ತಿದ್ದಿ ಮತ್ತೆ ಓದಿದೆ ನಾನು.

Monday, November 26, 2018

ಚಿಂತೆ

ಚಿಂತೆಯಿಲ್ಲದ ಸಂತನಿಗೆ
ಸಂತೆಯಲಿ ನಿದ್ದೆ !!!!
ಸಂತೆಯಲಿ ನಿದ್ದೆ
ಹೋದವನಿಗೆ ಇನ್ನೆಲ್ಲಿ ಚಿಂತೆ !!!!


ಬದುಕು

ಬದುಕಿನ ಪುಟವ
ತೆರೆದು ನೋಡು
ಖಾಲಿ ಗೀಚಿದ
ಬರಿಯ ಪುಸ್ತಕವಲ್ಲ

ಸಂಜೆಯ ಸಂತೆಯಲಿ

ಸಂಜೆಯ ಸಂತೆಯಲಿ
ಗುರುವಾರ ದಿನದಂದು
ನಿನ್ನ ನೋಡುತ ನಾನು
ನನ್ನ ನೋಡುತ ನೀನು
ಮೈ ಮರೆತಿದ್ದೆವು ನಾವು
ರಸ್ತೆ ಅಕ್ಕ ಪಕ್ಕದಲಿ ನಿಂತು

Saturday, November 24, 2018

ಮಳೆ

ಮೊದಲ ಮಳೆಯಂತೆ
ನೀ ಬಂದು
ಮತ್ತೆ ಭುವಿ
ತಂಪಾಗಿಸಿದೆ.....

Friday, November 23, 2018

ನೀರ್ ಗವನ

ರಸ ನಿಮಿಷಗಳ
ರಸ ಕಾವ್ಯವು
ಸರಸಕೆ ಸೆಳೆಯಿತು

*************

ಮನ ಕೆದಸಿದ
ಆ ನೋಟವು
ಕಣ್ಮಣ ಸೆಳೆಯಿತು

***************

ಬಾನ ರವಿಯ
ಎಳೆ ಹೊಂಗಿರಣವು
ಮೈ ತಾಕಿತು

****************


ಏನು? ತಾನೆ ಕೊಡಲು ಸಾಧ್ಯ?

ಹಸಿದವನಿಗೆ ಅನ್ನ ಹಾಕಬಹುದು...
ನೀರಾಡಿಕೆ ಆದವನಿಗೆ ನೀರು ಕೊಡಬಹುದು....
ಪ್ರೀತಿ ಸಿಗದವನಿಗೆ ಪ್ರೀತಿ ಕೊಡಬಹುದು....
ನಿರ್ಗತಿಕನಿಗೆ ಆಶ್ರಯ ಕೊಡಬಹುದು.....
ತಬ್ಬಲಿಗೆ ಆಸರೆಯಾಗಬಹುದು......
ಗುರಿ ಇಲ್ಲದವನಿಗೆ ದಾರಿ ತೋರಿಸಬಹುದು.....
ಆದರೆ......!
!
!!
!
!
!
ತಂದೆ ತಾಯಿ ಪ್ರೀತಿ ಸಿಗದವನಿಗೆ....
ಯಾರು? ಏನು ತಾನೆ ಕೊಡಲು ಸಾಧ್ಯ?

ಬಾಳಿದರೆಷ್ಟು?

ಓರೆಗೆ ಮಸೆದ
ಕತ್ತಿಯಂತೆ ಇರುವ
ನಾಲಿಗೆಗಳ ಮಧ್ಯದಲ್ಲಿ
ಬಾಳಿದರೆಷ್ಟು
ಬಾಳಿ ಬದುಕಿದರೆಷ್ಟು?.......

       ಹುಸಿ ನುಡಿಯುವ
ಮಾತುಗಳಿಗೆ 
ತಲೆಯಾಡಿಸುವ
ಜನರೊಂದಿಗೆ ಈ 
ಜೀವ ಬೆರೆತರೆಷ್ಟು 
ಬೆರೆತು ಹಂಚಿ ಹೋದರೆಷ್ಟು?.....



ಮಳೆ ಹನಿ




                             ಸಂಜೆ ತಂಪಿನ
                             ಮೈ ಸೋಕಿದ
                             ಮೊದಲ ಮಳೆ
                             ಹನಿ ನೀನು
                     
                       *******************

Sunday, November 18, 2018

ಬಿಸಿಲ ಮಳೆ ಹನಿ

ಬಿಸಿಲ ಬೇಗೆಯಲಿ                 
ತಂಪು ಸೂಸಿದೆ......
ಮೊದಲ ಹನಿಯಲಿ
ಮಣ್ಣ ಘಮ ತರಿಸಿದೆ......
ಸುಡು ಬಿಸಿಲಿನ ಹೊತ್ತಲಿ
ಮಳೆ ತರಿಸಿದ ಕಪ್ಪು ಮೋಡವೆ
ಧರೆಯನು ತಂಪಿರಿಸಿ ಹೋದ
ನಿನಗೆ ನನ್ನದೊಂದು ಪ್ರೀತಿಯ
ಸ್ವಾತಿ ಮುತ್ತು.

ಒಲವಿನ ಉಡುಗೊರೆ

                   
        
                           ಕೊರಗಬೇಡ ನೀ


Friday, November 16, 2018

ಸವಿ ಸವಿ ನೆನಪು

ನೆನಪಿನ ದೋಣಿ.....

 ಆ ಬಾಲ್ಯವೆ ಹಾಗೆ ಅಲ್ವಾ? ಆ ಬಾಲ್ಯದ ನೆನಪು ನೆನಪಾದಷ್ಟು ಮನಸು ಅರಳುತ್ತೆ. ನಾವೆಲ್ಲ ಚಿಕ್ಕವರಿದ್ದಾಗ ಮಳೆ ಬರೋವಾಗ, ಮಳೆ ನೀರನ್ನ ತದೇಕ ಚಿತ್ತದಿಂದ ಗಮನಿಸ್ತಾ ಕಳೆದೋಗ್ಬಿಡ್ತಿದ್ವಿ. ಮನೆಲಿ ಅಪ್ಪ- ಅಮ್ಮ ಇಲ್ಲ ಅಂದ್ರೆ ಅದೇನೊ ಆ ಮುಗ್ದ ಮನಸಿಗೆ ಏನೊ ಹಬ್ಬ. ಮಳೇಲಿ ನೆನೆಯೊದೇನೊ, ನಿಂತ ನೀರಲ್ಲಿ ಕುಣಿದು ನೀರನ್ನ ಚಿಮ್ಮಿಸೊದೇನೂ, ಒಬ್ಬರ ಮೇಲೊಬ್ಬರು ಎರೆಯೊದೇನು. ಹಾ.....ಹಾ....ನೆನೆಸ್ಕೊತಾಯಿದ್ರೆ ಈ ದಿನವೆ ಸಾಕಾಗಲ್ವೇನೊ, ದಿನ ಯಾಕೆ? ವಾರವೆ ಸಾಕಾಗಲ್ವೇನೊ ಅನ್ನಿಸಿ ಬಿಡುತ್ತೆ. ಹರಿಯುವ ಮಳೆ ನೀರಲ್ಲಿ ಕಾಗದದ ದೋಣಿ ಮಾಡಿ ಆ ದೋಣಿಲಿ ಹೆಸರನ್ನ ಗೀಚಿ ಬರೆದು ನೀರಲ್ ಬಿಟ್ಟು, ಕೈ ತಟ್ಟಿ ನೆಲ ಬಿಟ್ಟು ಕುಣಿದ ಆ ಖುಷಿ ಹೇಳಿದ್ರು ತೃಪ್ತಿಯಾಗಲ್ಲ. ಬಾಲ್ಯದ ಆ ಹಸಿ ನಿಶ್ಕಲ್ಮಶ ಪುಟ್ಟ ಮನಸು ಹಾಗೆ ಅಲ್ವ. ಆ ಪುಟ್ಟು ಮನಸಿಗೆ, ಮಗುವಿನಂತ ಮನಸಿಗೆ, ಗುಬ್ಬಚ್ಚಿಯಂತ ಖುಷಿ ಸಾಕು. ಆ ಖುಷಿಯನ್ನೆ ಹೆಚ್ಚು ಮಾಡುತ್ತೆ. ಬಾಲ್ಯದ ಜೀವನದಲ್ಲಿ ಕಳೆದ ಅದೆಷ್ಟೂ ಖುಷಿಗಳು, ಆಗೊಮ್ಮೆ ಈಗೊಮ್ಮೆ ಬೇಸಿಗೆಯಲಿ ಮಳೆ ಬಂದಂತೆ ನೆನಪಾದ್ರೆ......ಅ ಹೊತ್ತಲಿ ಮುಗುಳ್ನಕ್ಕು ಮನಸಾರೆ ಖುಷಿ ಪಡೊದಂತು  ನಿಜ.
ಪ್ರಸಾದ್.........🖍

ಸಹೋದರಿ ಕೇಳು ನೀ

ಕುಂಕುಮ ಇಡುವ ಹೊತ್ತಲ್ಲಿ
ಕಣ್ಣ್ ಮುಚ್ಚು ನೀನು|
ಬಳೆ ತೊಡಿಸುವ ಹೊತ್ತಲ್ಲಿ
ಕೈ ಚಾಚು ನೀನು|
ಮಾಂಗಲ್ಯದ ಹೊತ್ತಲ್ಲಿ
ತಲೆ ತಗ್ಗಿಸು ನೀನು|
ನಿನ್ನವನ ನೋಟದಲಿ
ನಸು ನಾಚು ನೀನು|
ನನ್ನ ಸಹೋದರಿ ನೀನು
ನಿನಗಾಗಿ ಹೇಳಿದೆ ರಸಕಾವ್ಯ ನಾನು|


ಮನಸೇ ಹೀಗೆ

ಭವದ ಭಾವದೊಳಗೆ
ಮಿಂದೆದ್ದ ಬದುಕಿಗೆ
ಹಾಸಿಗೆಯ ಹಾಸಾದೆ
ಗೀರಿದ ಗೀಚುಗಳಿಗೆ
ಗಾಸಿಯಾದಂತೆ
ಹರಿದ ಅರಿವೆಯಾದೆ
ಹೊಂಗಿರಣದ
ಹೊಸಿಲಲಿ ಹೆಜ್ಜೆಯಿಟ್ಟ
ಮಣ್ಣ ಧೂಳಾದೆ 

ಹನಿ ಹನಿ ಕನಸುಗಳು

ಭೋರ್ಗರೆವ
ಕಡಲು ನೀನು
ನಿನ್ನ ಸದ್ದಿಗೆ
ಕಿವಿಯೊಡ್ಡಲಾರೆ
                  *******
ಗರಿಗೆದರಿದ
ಕನಸುಗಳು ಚಂದ
ಆಸೆಗಳು ಚಂದ
                                         ********
ಕಾಲವು ಹೇಳಿತು
ನಾನೆಂದು ಹಿಂದೆ
ಸರಿಯೋಲ್ಲ
ನೀನು ಮುಂದೆ ಸಾಗು   
                  ********
ಆಕಾಶದ
ಬಾನಂಚು ಬಾಗುತಿದೆ
ನೀನೆಂದು
ಬಾಗಬೇಡ ಮನವೆ
                                            *********
ಕಾಣದ ಆಸೆಗೆಂದು
ಕೈ ಚಾಚಬೇಡ
ಹಾಗಂತ
ಕೈಕಟ್ಟಿ ಎಂದು ಕೂರಬೇಡ
                    *********
ನದಿ ಕಿನರೆಯಲಿ
ನನ್ನ ಬೊಗಸೆಯಲಿ
ಸೆರೆ ಸಿಕ್ಕ ಬಂಗಾರದ 
ಮೀನು ನೀನು

Thursday, November 15, 2018

ನನ್ನ ಹೃದಯ ಚೋರನು ಇವನು ಅಮ್ಮ

ನೋಡಮ್ಮಾ ಇವನು
ನನ್ನ ಮನಸಾ ಕದ್ದನು
ಗುಳಿ ಕೆನ್ನೆಯ ಮುದ್ದಾದ
ಮುಖದಲಿ ಅಂದದ
ನಗುವ ಬೀರುವನು
ನನ್ನ ಒಲ್ಲದ ಮನಸ
ಕದ್ದ ಕುಡಿ ಮೀಸೆ
ಸರದಾರನು ಇವನು
ನನ್ನ ಚಿತ್ತ ಚೋರನು ಇವನು
ಅವನೇ ಅಮ್ಮ ಇವನು
ನನ್ನ ಕೈ ಸೆರೆಯಾದವನು||



Wednesday, November 14, 2018

ಮರೆತೆ ನಾನು

ಚುಮು ಚುಮು ಚಳಿಯಲಿ
ಹೊಸ ಮುಂಜಾನೆಯ ಬೆಳಕಲಿ
ಹೆಜ್ಜೆ ಹಾಕೊ ಸೋಗಿನಲಿ
ಮರೆತೆ ನನ್ನೆ ನಾನು....!!

Sunday, November 11, 2018

ಹನಿ ಗವನ

ಮೌನಕೆ ಮಾತಾಗಿ
ಮಾತಿಗೆ ಸ್ವರವಾಗಿ
ಸ್ವರಕೆ, ಸ್ವರ ತಂತಿಯಾಗಿ
ಹೊರ ಹೊಮ್ಮಿದೆ ನೀನು
                               *******
ಬಣ್ಣದ ಸೀರೆಯ
 ಉಡುಗೆಯಲಿ
ನಿನ್ನಂದ ಕಂಡೆ
ಚೆಲುವೆ

ನಾ ಸಾಗುವ ದಾರಿಯಲಿ
ನೀ ಮೊದಲು ಸಾಗಿ
ಹಿಂತಿರುಗಿ ನೀನು
ಕೈಯ ಚಾಚಿ ಕರೆದೆ
                              *******
ಮಳೆ ಬಂದು ನೆನೆದರು
 ಕೊಡೆ ಹಿಡಿಯಲಿಲ್ಲ
ಕೊಡೆ ಹಿಡಿದು ನಿಂತರು
ನಿನ್ನ ಸನಿಹ
ಬೇಕೆಂದೆನಿಸಲಿಲ್ಲ


ನಿನ್ನ ನೆನೆಯುತಾ.....

ಕಣ್ಣಿನ ಕಣ್ಣಂಚಲಿ ಕಣ್ಣೀರ ಕಂಬನಿಯಾಗಿ
ಕೆಂದುಟಿಯ ತುಟಿ ಮೇಲೆ ಮುತ್ತಿನ ಮಳೆ ಸುರಿಸಿ
ಅಪ್ಪುಗೆಯ ಬಿಸಿಯನ್ನು ಅಪ್ಪಿ ಮುದ್ದಾಡಿ
ಬಿಸಿ ಉಸಿರನು ತುಟಿ ಕಚ್ಚಿ ಬಿಗಿ ಹಿಡಿಯುವೆ
ನಿನ್ನ ನೆನೆ ನೆನೆದು.........!!!!!

ಮನಸೇ ನಿನಗೊಂದು

ಈ ಮನಸೇ ಹಾಗೆ.........
ಮನಸ್ಸು, ಮನಸ್ಸಾದಾಗ ಮನಸಾರೆ ಖುಷಿ ಪಡುತ್ತೆ, ಸಂತೋಷ ಪಡುತ್ತೆ. ಇತರರನ್ನು ಖುಷಿಯಾಗಿಡುತ್ತೆ. ಆದ್ರೆ .....ಅದೇ ಮನಸ್ಸು, ಮನಸ್ಸು ಮುರ್ಕೊಂಡು ತಲೆ ತಗ್ಗಿಸ್ದಾಗ ಬೇಸರಿಸ್ಕೊಂಡು ಎಲ್ಲೊ ಒಂದು ಮನದ ಮೂಲೆಲಿ ತನ್ನದೆ ಪುಟ್ಟ ಮನೆ ಮಾಡ್ಕೊಂಡು ಒಂಟಿ ಗುಬ್ಬಚ್ಚಿಯಂತೆ ಕಣ್ಣೀರು ಸುರಿಸುತ್ತಾ ಇರುತ್ತೆ ಅಲ್ವಾ!!.  ಮನಸ್ಸೇ ಹೀಗೆ ಅಲ್ವಾ... ಯಾವಾಗ ನಗುತ್ತೊ.....ಯಾವಾಗ ಅಳುತ್ತೊ......ಯಾವಾಗ ನಲಿಯುತ್ತೊ.......ಯಾವಾಗ ನಗಿಸುತ್ತೊ ಯಾವ ದೇವರಿಗು ಹೇಳೊಕಾಗಲ್ವೇನೊ. 

ಸರಿ ಬಾಯ್.....
ಮತ್ತೆ ಇನ್ನೊಂದು ಬರವಣಿಗೆ ಜೊತೆ ಸಿಗೋಣ ಅಲ್ಲಿ ತನಕ ಮನಸಾರೆ ನಗೊ ಪ್ರಯತ್ನ ಮಾಡಿ.
ಪ್ರಸಾದ್..........🖍

ನನ್ನೊಲುಮೆಯ ನೆನಪಿನ ನಾವಿಕ ನೀನು

ನನ್ನ ಸ್ನೇಹಿತನು ನೀನು........ನನಗೆ ಬಂಧುವು ನೀನು....... ನನ್ನ ಆತ್ಮೀಯನು ನೀನು........ನನಗೆ ಆಪ್ತನು ನೀನು.
   ಆ ಕಷ್ಟವಲ್ಲದ ದಿನಗಳಲಿ ನನಗೆ ಇಷ್ಟವಾದೆ ನೀನು. ಆಪ್ತವಾಗಿ ನನಗೆ ಹತ್ತಿರವಾದೆ........ಮತ್ತೆ ಆ ದಿನದ ಕ್ಷಣಗಳು ಮತ್ತೆ ಬರಲಿಲ್ಲವೇನೊ ಅನ್ನುವಷ್ಟು ನನ್ನ ಮನಸಲಿ ನೀನು ನನಗೆ ನೆನಪಾದೆ. ಹೇ ನೆನಪಿನ ನಾವಿಕನೆ...... ಮರೆಯಲಾಗದ ಹೊತ್ತಲ್ಲಿ ಮತ್ತೆ ಮತ್ತೆ ನೆನಪಾಗಿ ಕಾಡೊ ನಿಜ ಸ್ನೇಹಿತ ನೀನು. ನೀನ್ಯಾರೊ ಎಂಬುದು ತಿಳಿಯದ ಹೊತ್ತಲ್ಲಿ ದಡ ಸೇರಿಸಿದೆ ನೀನು. ನನ್ನ ಪರಿಚಯವಾಗೊ ಸಮಯದಲಿ ನನ್ನಿಂದ ದೂರವಾದೆ ನೀನು. ಹೇ ನೆನಪಿನ ನಾವಿಕ ಸ್ನೇಹಿತನೆ ನನ್ನಿಂದ ಹೀಗ್ಯಾಕೆ ದೂರಾದೆ ಎಂದು ನಾನು ಕೇಳಲಾರೆ. ಮುಂದೆಂದೋ.....ನಾನು ಬಯಸಿದ ದಾರಿಯಲಿ ನೀನು ಆಸರೆಯಾದರೆ ಅಷ್ಟೆ ಸಾಕು ಸ್ನೇಹಿತನೆ. ನಾನು ಕೂಗಿ ಕರೆಯುವ ಮುನ್ನ ನನ್ನೆದುರು ಬಂದು.....ನನ್ನ ಕಣ್ಣ ಮುಂದೆ ಬಾ ಗೆಳೆಯನೆ. ನಿನ್ನ ಅಕ್ಕರೆಯ ಪ್ರೀತಿ ನೀರಾಗಿ ಕೆಳಗಿಳಿವ ಮುನ್ನ ನನ್ನೊಂದಿಗೆ ಹೆಜ್ಜೆ ಹಾಕಿ ನನ್ನ ಸ್ಫೂರ್ತಿಯಾಗು. ನನ್ನ ಸಾಧನೆಯ ಕನಸುಗಳಿಗೆ ಬೆನ್ನಲುಬಾಗಿ ನನ್ನ ಶಕ್ತಿಯ ಚಿಲುಮೆಯಾಗು ಗೆಳೆಯ.
ಪ್ರಸಾದ್.........🖍

Saturday, November 10, 2018

ಮರೆಯಲಾಗದ ಸವಿ ಸವಿ ನೆನಪು


( ನೆನಪುಗಳೆನ್ನುವುದು ಪ್ರತಿಯೊಬ್ಬರ ಜೀವನದಲ್ಲಿ ಇರುತ್ತೆ, 
ಆ ನೆನಪುಗಳನ್ನ ಮತ್ತೆ ಮತ್ತೆ ನೆನೆಯೋದೆ ಒಂದು ಖುಷಿಯಾದ್ರೆ....ಆ ನೆನಪುಗಳನ್ನ ಆತ್ಮೀಯರೊಂದಿಗೆ ಹಂಚ್ಕೊಳ್ಳೋದು ಅಂದ್ರೆ ಇನ್ನು ಎಲ್ಲಿಲ್ಲದ ಖುಷಿ. ಇಂತಹ ಖುಷಿಯ ಕ್ಷಣಗಳು ಕೂಡ ನನ್ ಬದುಕಲ್ಲು ನಡೀತು. ಬನ್ನಿ ಆ ಕ್ಷಣವನ್ನ ನನ್ನ ಓದುಗ ಮಿತ್ರರಾದ ನಿಮಗೆ ಅದೇನು ಅನ್ನೋದನ್ನ  ಹೇಳ್ತಿನಿ.)


ನನ್ನ ಕಣ್ಣು ಸೆಳೆದಾಕೆ........

    ಅಂದು ನನ್ನ ಅಕ್ಕನ ಮದುವೆ ಆ ಮದುವೆಯಲಿ ಗಂಡಿನ ಕಡೆಯೋರು....ಹೆಣ್ಣಿನ ಕಡೇಯೋರು ಅಂತ ದಿಬ್ಬಣ ಇರುತ್ತೆ. ನಮ್ಮದು ಹೆಣ್ಣಿನ ಕಡೆ, ಆ ಕಡೆಯಿಂದ ಗಂಡಿನ ಕಡೆ. ನಾವು ಮದುವೆ ಮನೆಯಿಂದ ಹೊರಡ್ಕೊಂಡು ಮದುವೆ ದಿಬ್ಬಣದ ಜೊತೆ ಮದುವೆ ಹೋಲ್ ಗೆ  ಬಂದ್ವಿ.
    ಅಲಂಕಾರಕ್ಕೆ ಅಂತ ಎರಡು ಕಡೇಯೋರಿಗೆ ಒಂದೊಂದು ರೂಮ್ ಇತ್ತು. ನಾನೇನ್ ಮಾಡ್ದೆ ಅಂದ್ರೆ ಆ ರೂಮಿಂದ....ಈ ರೂಮ್ ಗೆ, ಈ ರೂಮಿಂದ..... ಆ ರೂಮ್ ಗೆ ಹೀಗೆ ಅತ್ತಂದಿತ್ತ...ಖುಷ್ ಖುಷಿಯಿಂದ ಪಿಂಕ್ ಅಂಗಿ ಜೊತೆ ಒಂದು ಸ್ಟೈಲೀಷ್ ಗ್ಲಾಸ್ ಹಾಕೊಂಡು ಓಡಾಡ್ತಯಿದ್ದೆ. ಈ ಪಿಂಕ್ ಕಲರ್ ಅಂಗಿನು ನನ್ ಅಕ್ಕನ ಮದುವೆಗಂತ ಹೊಲ್ಸಿದ್ದು, ಮತ್ತೆ ಗ್ಲಾಸ್ ಕೂಡ ಮೊದಲನೆ ಸಲ ಫಂಕ್ಷನ್ ಗೆ ಹಾಕಿದ್ದು. ವಿಷ್ಯ ಈಗ ಶುರು.......
   ಅಲ್ಲಿ ಒಬ್ಳು ಹುಡುಗಿ ನನ್ನ ನೋಡಿ ಹಂಗೆ ಒಂದ್ ...  ಸ್ಮೈಲ್ ಕೊಡ್ತಿದ್ಲು. ನಾನು ಅಷ್ಟೊಂದು ಗಮನಕ್ಕು ತಗೋಳಿಕ್ಕೆ ಹೋಗಿಲ್ಲ. ಹಂಗೆ ನೋಡ್ತಿದ್ದೆ.....ಸ್ಮೈಲ್ ನಾನು ಕೊಡ್ತಿದ್ದೆ. ಅದೇ ತಿಂಗಳಲ್ಲಿ ನನ್ನ ದೂರದ  ಸಂಬಂಧಿ ಮಾಮನ ಮದುವೆ ಕೂಡ ಇತ್ತು. ಈ ಮಾವನ ಹುಡುಗಿನು ಬಂದಿದ್ಲು, ಅವರ ಹುಡುಗೀನು ಮದುವೆ ಸ್ಟೇಜ್ ಮೇಲೆ ನಿಂತಿದ್ಲು. ಮಾವ ನನ್ನ ಕರೆದು ನನ್ನತ್ರ ಒಂದು ಗುಲಾಬಿ ಹೂ ತಗೊಂಡು ಬಾರೊ......ಅಂತಾ ಹೇಳಿದ್ರು. ನಾನು ಹುಡುಗನ ಕಡೆ ರೂಮ್ ಗೆ ಹೋದೆ. ಆ ರೂಮಲ್ಲಿ ಇಬ್ರು ಹುಡುಗೀರು ಇದ್ರು ಅವರು ಗುಲಾಬಿ ಹೂವನ್ನ ಮುಡ್ಕೊಂಡು ಇದ್ರು. ನಾನ್ ಇವರತ್ರ ಹೆಂಗ್ ಕೇಳೋದು ಅಂತ ತಲೆ ಕೆರ್ಕೊಂಡು ನಿಂತೆ ಯಾಕಂದ್ರೆ ಇವರ ಪರಿಚಯ ಇಲ್ಲ ಬೇರೆ. ಅಲ್ಲೆ ನಮ್ಮಚಿಕ್ಕಪ್ಪ ಇದ್ರು  ಅವರ ಹತ್ರ ಹೀಗ್.....ಹೀಗೆ ವಿಷಯ ಅಂತ ಹೇಳಿ ಅವರ ಹತ್ರ ಕೇಳೋಕೆ ಹೇಳ್ದೆ. ಚಿಕ್ಕಪ್ಪ ಅವಳ ಹತ್ರ ಕೇಳ್ದ್ರು. ಆದ್ರೆ ಅವಳು ನಂಗೆ ಸ್ಮೈ ಲ್ ಕೊಟ್ರು ಬಿಟ್ರೆ ನಿಜವಾಗ್ಲು ನಂಗೆ ಹೂವಂತು ಕೊಡ್ಲಿಲ್ಲ. ನಂಗಲ್ಲ ಬೇರೆಯವರಿಗೆ ಅಂತ ಹೇಳಿದ್ರು ಕೊಡ್ಲಿಲ್ಲ. ಮತ್ತೆ ವಾಪಾಸ್ ಬಂದೆ......ಇವಳು ನಾನ್ ಎಲ್ಲಿ ಹೋದ್ರು ನನ್ನ ನೋಡ್ತಿದ್ಲು...ನಾನು ನೋಡ್ತಿದ್ದೆ. ಸ್ಮೈಲ್ ಕೊಡ್ತಿದ್ಲು...ನಾನು ಸ್ಮೈಲ್  ಕೊಡ್ತಿದೆ. ಹೀಗೆ ಮದುವೆಯಲಿ ನಮ್ ಆಟ ಹಿಂಗ್ ನಡೀತು.
  ಸಾಯಂಕಾಲ ನಮ್ಮ ಅಕ್ಕನ ಕಡೆ ದಿಬ್ಬಣ ಗಂಡಿನ ಮನೆ ಕಡೆ ಹೋಗುತ್ತೆ. ಅಲ್ಲಿ ಆರಕ್ಷತೆ ನಡೆಯುತ್ತೆ, ಮತ್ತೆ ಸಂಬಧೂಟ ಅಂತ ನಡೆಯುತ್ತೆ.  ಅಲ್ಲಿ ಕೂಡ ನಾನು ಇವಳು ಎಲ್ಲಿ ಇರ್ ಬಹುದು ಅಂತ ಆ ಕಡೆ ಈ ಕಡೆ ಕಣ್ ಹಾಯಿಸ್ತಾ ಇದ್ದೆ. ಆದ್ರೆ ಅಲ್ಲಿ ನಿಜವಾಗ್ಲು ಬರ್ಲಿಲ್ಲ.
******************************************
   ಸುಮಾರು ದಿನಗಳ ನಂತರ

    ಒಂದಿನ ನಾನು ನಮ್ಮ ಸಂಬಂಧಿಕರ ಫಂಕ್ಷನ್ ನಲ್ಲಿ ಹೋಗಿದ್ದೆ. ನಾನು ನಿಜವಾಗ್ಲು ಅಂದ್ಕೊಂಡಿರ್ಲಿಲ್ಲ. ಇವಳು ಅಲ್ಲಿ ಬಂದಿದ್ಲು. ನಂಗೆ ನಿಜವಾಗ್ಲು ಇದು ನಿಜಾನ, ಇವಳು ಅವಳೇನಾ? ಅನ್ನೊ ಕನ್ ಫ್ಯೂಶನ್ ಕೂಡ ನನಗೆ ಶುರು ಆಯ್ತು. ಬೇರೆ ಯಾರೋ ಏನೊ ಅಂತ ಸುಮ್ನಾದೆ, ನಾನು ಮಾತಾಡ್ಲಿಕ್ಕೆ ಹೋಗಿಲ್ಲ. ಸುಮಾರು ಹೊತ್ತಲ್ಲಿ ಮತ್ತೆ ಪೂಜೆ ಸಮಯಕ್ಕೆ ಪೂಜೆ ನಡೆಯುವಾಗ ನಾನು ನಿಂತಿದ್ದೆ, ಇವಳು ನನ್ನ ನೋಡಿ ನನ್ನ ಪಕ್ಕಕ್ಕೆ ಬಂದು ನಿಂತಿದ್ಲು. ನಂಗೆ ನಿಜವಾಗ್ಲು ಏನು ಮಾತಾಡೋದು ಅಂತ ಗೊತ್ತೆ ಆಗಿಲ್ಲ. ನಾನು ಸುಮ್ನೆ ನೋಡಿ....ನೋಡ್ದೆ ಇರೊ ತರ ಸುಮ್ನಾದೆ. ಇವಳು ಅಷ್ಟು ಜನ ಇದ್ರು ನನ್ನ ಜೊತೆನೆ ನನ್ನ ಪಕ್ಕನೆ ನಿಂತ್ಕೊಂಡಿದ್ಲು.... ಏನು ಮಾತಾಡ್ಸೋದು...ಹೇಗ್ ಮಾತಾಡಸ್ಲಿ ಅಂತ ಯೋಚ್ನೆ ಮಾಡ್ತಾ...ಮಾಡ್ತಾನೆ, ಮಾತಾಡಸ್ದೆ.
  ನನಗೆ ಒಂದು ಗೇಮ್ ಹೇಳಿ ಕೊಟ್ಟಿದ್ಲು.....ಬಿಂಗೊ ಅಂತ. ಈ ಗೇಮ್ ಇನ್ನು ನೆನಪಿದೆ, ಈ ಗೇಮ್ ನ ಮರೆಯೋಕೆ ಆಗಲ್ಲ.
  ಮತ್ತೆ ನಾವಿಬ್ರು ಉಡುಗೊರೆ.......ಮುಯ್ಯಿ ಕವರ್ ಗಳನ್ನ ಲೆಕ್ಕ ಮಾಡಿದ್ದು ಈ ನೆನಪಂತು ನನಗೆ ಪದೆ ಪದೆ ನೆನಪಾಗೋದು.
  ಇಷ್ಟು ಸಾಕು ಅಂದ್ಕೋತಿನಿ.......ಹೇಳಿದ್ದು. ಹೇಳಿಕ್ಕೆ ಇನ್ನು ಇದೆ ಆದ್ರೆ ಸಾಕು.

ನಿಮ್ಮ ಜೀವನದಲ್ಲಿ ಕೂಡ ಇಂತಹ ನೆನಪುಗಳೇನಾದ್ರು ಇದ್ರೆ ನೀವು ಕೂಡ ಕೆಳಗೆ ಬರೀಬಹುದು, ನೀವು ಬರೀರಿ ಮತ್ತೆ ಮತ್ತೆ ಬರೀರಿ... .......ಬರೀತಾನೆ ಇರಿ. ಆ ಖುಷಿಯ ಕ್ಣಣ ಯಾವುದೇ ಆಗಿರಬಹುದು.
ಪ್ರಸಾದ್..........🖍

Thursday, November 8, 2018

ನಿನ್ನ ಕೈಗಳಲಿ


ನೀ ಹಿಡಿದ ಪುಟ್ಚ ಕೈ ಗಳಲಿ
ಹಣತೆಯ ಕಂಡು
ನಾ ಓಡೋಡಿ ಬಂದು
ಮಗುವಿನಂತೆ ಎದುರು ನಿಂತು
ಪ್ರೀತಿಯ ಹೃದಯ ಜ್ಯೋತಿಯ ಕಂಡೆ.

ಭಾವದ.....ಭಾವನೆಯ ಲೋಕದಲಿ ತೇಲಿದೆ ನಾನು

ಪರ್ವತದಷ್ಟು ಹೊತ್ತ ಆ ನನ್ನ ಕನಸುಗಳು.......ಮತ್ತೆಂದೊ ತಿರುಗಿ ನೋಡದೆ ಮಾಡಿದಂತ ಆ ನಿನ್ನ ಮಾತುಗಳು..... ನಾನು ಏಕಾಂಗಿಯಾದಾಗ  ಕಾಡೊ ಆ ಒಂಟಿತನ.... ಮುಗಿಲು ಮುಟ್ಟಿ ಹೇಳೊ ಆ ನನ್ನ ಪ್ರೇಮ ಧನಿ..... ಮುಂದೆಂದು ಕಾಣದೇನೊ ಅನ್ನಿಸುವ ನಿನ್ನ ಕುರಿತ ಕನಸುಗಳು...... ಹಾಗೆ ನೆನೆದು ನಡೆದು ಸವೆದ ಬರಡು ದಾರಿ...... ಮತ್ತೆ ಬರೆಯಲಾರೆನೊ ಅನ್ನೊ ನನ್ನ ಖಾಲಿ ಪೆನ್ನು..... ತೊರೆಯ ತೀರದ ಬರಡು ಮನಸಿನ ಅದೆಷ್ಟೊ ನೆನಪುಗಳು..... ಎಂದೂ ಕಣ್ಣು ಮುಚ್ಚಿ ಬರೆಯದ ಈ ಖಾಲಿ ಕಾಗದದ ಮೇಲೆ ಬರಿಯ ಒಂದು ನೀಲಿ ಚುಕ್ಕಿ..... ಯಾಕೆ ?ಹೀಗೆ ಎಂದು ನನಗೆ ನನ್ನಲ್ಲಿ ಪ್ರಶ್ನೆ ಮಾಡಿದ ಆ ದಿನದ ಗಳಿಗೆ..... ಗಡಿಯಾರದ ಸಮಯ ಅದೆಷ್ಟೋ ಹಿಂದೆ ತಿರುಗಿದರೆ ಮತ್ತೆ ಹಿಂದೆ ನಾನು ಹೋಗುವೆನೇನೊ ಅನ್ನೊ ನನ್ನ ಮನಸಿನ ಭಾವನೆಗಳು.....
ಮತ್ತೆ ಹೇಳುವೆ ನಾನು ಕೂಗಿ....ಕೂಗಿ, ಮತ್ತೆ ಅಳುವೆ ನಾನು ಬಿಕ್ಕಿ......ಬಿಕ್ಕಿ, ಮತ್ತೆ ಕರಗುವೆ ನಾನು ಉರಿಯುವ ಮೇಣದ ಬತ್ತಿಯಾಗಿ, ಮತ್ತೆ ನಗುವೆ ನಾನು ನಿನ್ನ ಹುಚ್ಚು ಪ್ರೇಮಿಯಾಗಿ.......
ಹೇ ಜೀವದ ಆತ್ಮವೆ ನೀನೊಮ್ಮೆ ಬಂದು ನನ್ನೆದುರು ನಿಲ್ಲು.
ನನ್ನ ಬಳಿ ಸೇರು.......ನನ್ನ ಬಿಗಿಯಾದ ಅಪ್ಪುಗೆಯಲಿ ಬಂಧಿಯಾಗಿ ನನ್ನ ಪ್ರೇಮಕೆ ಶರಣಾಗು ನೀ.!!!
ಪ್ರಸಾದ್.........🖍

ಚಿನ್ನು

ಹೇ......ನನ್ನ ಪ್ರೀತಿಯ ಹುಡುಗಿ......ಇಲ್ಲಿ ಒಮ್ಮೆ ಕೇಳು.
ನಾನಿಟ್ಟ ಪ್ರತಿ ಹಣತೆಯನ್ನು ನಿನ್ನ ನೆನೆದು ಜೋಡಸಿದೆ ನಾನು. ನೀನು ಮುಂದೆ ಸಾಗುವ ದಾರಿಯಲಿ ಒಮ್ಮೆ ನನ್ನ ಹಿಂತುರುಗಿ ನೋಡಿ ನನ್ನ ಮನಸನು ನಿನ್ನ ಮನಸಲಿ ಸೆರೆ ಹಿಡಿ. ಮತ್ತೆ ಹೇಳು ನೀನು ಮತ್ತೆ ತಿರುಗಿ ಹೇಳು.....ನಿನ್ನ ನಾನು ಬಿಟ್ಟಿರಲಾರೆನೆಂದು.  ನೀನು ನೀಡಿದ ಆ ಪ್ರೀತಿಯನ್ನು  ಎಂದು ಬಣ್ಣಿಸಲಾಗದೆ .........??????????

ದೀಪ





ನನ್ನ ಪ್ರೀತಿಯ ಹಣತೆಗಳೆ
ನಿಮ್ಮ ಪ್ರತಿ ದೀಪದ ಕಾಂತಿಯು
ಬಣ್ಣಿಸಿ ಹೇಳಿ.......

Saturday, November 3, 2018

ನೆನಪಾಗಬೇಡ

ಗೊತ್ತಿಲ್ಲದ ಹೊತ್ತಲ್ಲಿ
ಹೊತ್ತಲ್ಲದ ಹೊತ್ತಲಿ
ನೀ ಹೇಗೆಂದು ನೆನಪಾಗಬೇಡ

ಹಾಗೆ ಸುಮ್ಮನೆ

ನನಗೂ ಆಸೆ
ನಿನಗೂ ಆಸೆ
ನಮ್ಮಿಬ್ಬರಿಗು ಹೇಳಲಾಗದೆ
ಆಗೋಯ್ತು ನಿರಾಸೆ

******************************************

ಹೇ ನನ್ನ ಮುದ್ದು ಪಾರಿವಾಳವೆ

******************************************

ಬಾ ಗೆಳತಿ

ಓಡಿ ಬಾ ಗೆಳತಿ
ಬಾನಗಲದ ಹೊರಗಿನ
ಬಾಗಿಲಲಿ ಮಳೆರಾಯನು
ಹನಿ ಬಿಂದುವಿನಂತೆ
ತೊಟ್ಟಿಕ್ಕುವನು
ನೀನೊಮ್ಮೆ ನೋಡು
ನನ್ನ ಕಣ್ ಮುಂದೆ ನಿಂತು

ಮಳೆರಾಯ

ಹೋ.......ಮಳೆರಾಯನೆ
ಗಂಟಲು ಬಿರಿದು
ಕೂಗಿ ಕೂಗಿ ಹೇಳುವೆ
ಮತ್ತೆ ಮತ್ತೆ ಉದ್ಘರಿಸುವೆ
ನೀನ್ನೊಮ್ಮೆ ಬಂದು
ಭೂ ತಾಯಿ ಒಡಲ ಸೇರಿ
ಜಗದ ದಾಹವ ತಣಿಸು

Friday, November 2, 2018

ಕವಿತೆ ( ತಾ )

ಮೀನ ಕಂಗಳ
ಚೆಲುವೆ ನೀನು!
ಮನ ಕದಿಯೊ
ನಗುವ ಬೀರಿ
ನನ್ನ ಕವಿತೆಯನು
ಕದ್ದಾಕೆ ನೀನು.....

******************************************

ಓ ಚಂದ ಮಾಮನೆ
ನೀನೆ ಹೇಳು ಈ ದಿನ
ನನ್ನ ಕವನ ಸಾಲನ್ನು ಕದ್ದ 
ಶ್ವೇತ ವರ್ಣ
ಮುದ್ದಾದ ಚೋರಿಗೆ 
ನೀನೊಂದು ಹೆಸರಿಡು!!

******************************************

ಮೊದಲ ನೋಟ ನಿನ್ನದು
ಮೊದಲ ನಗುವು ನಿನ್ನದು
ಮೊದಲ ಕವನ ನನ್ನದು
?
?
?
ಈ ಕವನದ ಹೊಗಳಿಕೆ ನಿನ್ನದೆ ಹುಡುಗಿ....

Thursday, November 1, 2018

ಗೊತ್ತಿಲ್ಲ!........ನೀನ್ಯಾರೆ?

ನೀನು ಎಲ್ಲಿದ್ದೀಯಾ? ಗೊತ್ತಿಲ್ಲ
ನೀನು ನನ್ನ ಪ್ರೀತಿಸ್ತೀಯಾ? ಅದೂ ಗೊತ್ತಿಲ್ಲ
ನೀನು ನನ್ನ ನೋಡಿದ್ದೀಯಾ? ಅಂತಾನು ಗೊತ್ತಿಲ್ಲ
ನಾನು ನಿನ್ನ ನೋಡಿದ್ದೇನೊ..! ಅದಂತು ನಂಗೊತ್ತಿಲ್ಲ
ನನ್ನ ನೀನು ನೆನಸ್ಕೋತಿಯಾ...!ಅದೂ ತಿಳಿದಿಲ್ಲ
ಹೇ.......ಹುಡುಗಿ ಕೂಗಿ.....ಕೂಗಿ ಹೇಳುವೆ ನಾನು.....
ನೀನ್ಯಾರೆ?.......ನೀನ್ಯಾರೆ?.........ನೀನ್ಯಾರೆ?
ಯಾಕೆ ಹೀಗೆ ಕಾಡುವೆ ........ಹೇಳೆ.

ಚುಟುಕು ಕವನ

ಬಾನಂಗಳದ ಅಂಚಲಿ
ತೋರಣವ ಹೊಸೆದು
ಆ ತೋರಣದ ಸಾಲಲಿ
ಹೊಸ ಚಿಗುರಿನ
ಚಿಗುರೆಲೆ ಕಂಡೆ ನಾನು

******************************

ತೊಟ್ಟಿಕ್ಕಿದ ಮಳೆ ಹನಿಯು
ಜಾರಿ ಕವಲೊಡೆದ ಎಲೆ
ಮೇಲೆ ಬಿದ್ದು ನಾಚಿತು

*******************************



Wednesday, October 31, 2018

ದೀಪಾವಳಿ

ನನ್ನ ಮನೆಯ ಮನದ
ಬೆಳಕಾಗಿ ಬಾ ಗೆಳತಿ
ನಮ್ಮಿಬ್ಬರ ಬೆಳಕಿನ ದೀಪವನ್ನ
ಹೃದಯದಲ್ಲಿ ಬೆಳಗಿಸೋಣ
ಓಡಿ ಬಾ 
ಹಂಸವರ್ಷಿಣಿಯೇ
ನಮ್ಮಿಬ್ಬರ ದೀಪಾವಳಿ
ದೀಪವು ಆರುತಿದೆ

ಹೇ ಬೆಳಕಿನ ದೀಪವೆ
ಎಂದೆಂದು ನೀನು
ನಮ್ಮಿಬ್ಬರ ಬಾಳಿನ
ಜ್ಯೋತಿಯಾಗಿರು


ಮುತ್ತು ಕೊಟ್ಟು

ಬರೆದ ಕವಿತೆಗಳನು
ನೀನು ಓದಿದೆ.....
ಓದಿ ಓದಿ ಕಣ್ಣೀರಿಡುತ್ತಾ
ಕವಿತೆಗಳಿಗೆ ಮುತ್ತಿನ
ಮಳೆ ಸುರಿಸಿದೆ.
******************************************
ನನ್ನ ನೆನೆದು ನೀನು
ಓಡೋಡಿ ಬಂದಾಗ....! 
ನನ್ನ ಬಯಸಿ ನೀನು
ನನ್ನೆದುರು ನಿಂತಾಗ....!
ನನ್ನ ಕೆನ್ನೆಗೆ ನೀನು 
ಮುತ್ತೊಂದ ನೀಡಿದೆ....!


ಇಬ್ಬನಿಯೇ......

ಹೇ .......ಇಬ್ಬನಿಯೇ
ನೀನು ಇಷ್ಟೊಂದು 
ಚೆಲುವಾಗಿ ಹೊಳೆಯುತ್ತಿಯಲ್ಲ......!!
ನಿನ್ನ ನಲ್ಲ ಬರುವ ಸಮಯದಲಿ
ಗಿಡದ ಎಲೆ ಮೇಲೆ
ಜಾರದೆ ಕಾದು ಕುಳಿತೆಯಾ ಇಬ್ಬನಿಯೆ.....!!

Monday, October 29, 2018

ನನ್ನ ಮನಸ್ಸು

ಬದುಕೆಂಬ ಜೋಕಾಲಿಲಿ
ತೆರೆದಿಟ್ಟ ಮನಸ್ಸು ನನ್ನದು
ಆ ಮನಸಿನೊಳಗೊಂದು
ಅದೆಷ್ಟೊ ಭಾವನೆಗಳು ಇಂದು

Sunday, October 28, 2018

ನೀ ಹೇಳು

ಮುಸ್ಸಂಜೆ ಸಮಯದಲಿ
ಚಿಲಿ ಪಿಲಿ ಹಕ್ಕಿಗಳ ಕಲರವ ಜೊತೆ!
ನಿನ್ನ ಸನಿಹದಲಿ ಕೂತು ಹೇಳಿದ
ಆ ನನ್ನ ಮನಸಿನ ನಲಿವು!
ನೀನು ಹೇಳಿದ ಆ ಮಾತುಗಳು
ಮತ್ತೆ ಮತ್ತೆ ನೆನಪಾಗಿ ಕಾಡೊ ಹೊತ್ತು!
ಮಧುರ ಕ್ಷಣವಾದ
ಈ ಗಳಿಕೆ ಹೇಗೆಂದು ಬಣ್ಣಿಸಲಿ ನಾನು?

ಸ್ನೇಹ

ಮೊದ ಮೊದಲು
ಮಣ್ಣಿನ ಸೊಗಡಿನಲಿ
ಚಿಗುರಿದ ಬಳ್ಳಿಯಂತಿರುವ
ಈ ನನ್ನ ಸ್ನೇಹದ ಮನಸಿನೊಳಗೆ
ನಿನ್ನ ಬರಮಾಡಿದೆ ನಾನು
ಹೇಗೆ ಈ ಕ್ಷಣವ ಮರೆಯಲಿ
ಓ.. ಸ್ನೇಹವೆ.......ನೀ ಹೇಳು

Saturday, October 27, 2018

ನನ್ನ ನೀ ಮರೆಯದಿರು

ಏ....ಮಳೆ ಹುಡುಗಿ
ನನ್ನಲ್ಲಿ ನೀನು
ತಂಗಾಳಿಯಾಗಿ ಬೀಸೊ ಕ್ಷಣ
ಮೋಡದಿಂದ
ಮಳೆಯಾಗಿ ಸುರಿಸೊ ಕ್ಷಣ
ಧರೆಗಿಳಿದು ಬಂದು
ಭೂ ತಾಯಿ ಒಡಲ ಸೇರೊ ಕ್ಷಣ
ನನ್ನ ನೀ ಮರೆಯದಿರು......

ಪ್ರೀತ್ಸಿ

ಪ್ರೀತಿ ಹುಟ್ಟಲು ಕಾರಣವ ಬೇಕಿಲ್ಲ
ದೂರವಾಗಲು ನೆಪವೊಂದು ಸಾಕು
ಆ ಕಾರಣದ ನೆಪವೊಂದಕೆ ಪ್ರೀತಿಯು ಬಲಿಯಾಗಿ
ಹುಚ್ಚು ಹೃದಯಗಳು ಅದೆಷ್ಟೊ ಹುಚ್ಚಾಗಿ ಬಲಿಯಾಗಿ
ಮತ್ತೆ ಅರಳದೆ ಹೋದವು
ಪ್ರೀತಿ ಕುರುಡು ಅಲ್ಲ ನಿಜ
ಪ್ರೀತ್ಸೋರು ಕುರುಡರಲ್ಲ

Friday, October 26, 2018

ನೀನೆಂದರೆ

ಹೇ ಸಂಚಿಯೆ......ನಿನಗಾಗಿ ಬರೆದ ಆ ಕೊನೆಯ ಪುಟಗಳು. ಇಂದು ತೆರೆದೆ ನಾನು. ಆ ತೆರೆದ ಪುಟದಲಿ ಬರೆದ ನಿನ್ನ ಮೊದಲ ಅಕ್ಷರ. ಕೊನೆಯ ಸಾಲಲಿ ಚಿತ್ರಿಸಿದ ನಿನ್ನ ಹೆಸರು. ಹಾ...ಹಾ...ನೆನೆಯೋದೆ ಚೆನ್ನಾ. ನನ್ನ ಜೀವನದಲ್ಲಿ ನೆನೆದ ಮೊದಲನೆ ಸಂಚಿ ನೀನು ಏನಂತೀಯಾ?..... 

ಪ್ರಸಾದ್.......🖍

ಸಂಬಂಧಗಳನು ತುಳಿಯದಿರು

ಸ್ನೇಹಕೆ........ಸ್ನೇಹವೆ ಸಾಟಿ
ಪ್ರೀತಿಗೆ........ಪ್ರೀತಿಯೆ ಸಾಟಿ
ಪ್ರೇಮಕೆ......ಪ್ರೇಮವೆ ಸರಿ ಸಾಟಿ

ಇಲ್ಲಿ ಎಲ್ಲವು ಉತ್ತಮ......ಸಂಬಂಧಗಳು ಪರಿಪೂರ್ಣ ಎಂಬುದು ತಿಳಿದು, ತುಳಿಯದೆ ಬಾಳೋಣ.

ಹಂಗಿಸಬೇಡ

ನನ್ನ ಹುಚ್ಚನೆಂದು ಹಂಗಿಸಿದರು
ನಾನು ಯೋಚಿಸಲಾರೆ......
ನನ್ನ ಹಂಗಿಸಿದರು ನಿನ್ನ
ಬಿಟ್ಟು ಕೊಡಲಾರೆ.......

ಹುಚ್ಚ ಎಂದರು....ನನ್ನ ಹಂಗಿಸಿದರು
ನಿನ್ನ ಪ್ರೀತಿಯನು ನನ್ನ ಬೊಗಸೆಯಲಿ
ಬಚ್ಚಿಟ್ಟು ಕಾಪಾಡಿ ನಿನ್ನ ಸಂತೋಷಿಯಾಗಿಡುವೆ.....

ಹೇಳಿದೆ ನೀನು

ಕಥೆಯಾಗಿ ಹೇಳಿದೆ ನೀನು
ಒಗಟಾಗಿ ಹೇಳಿದೆ ನೀನು
  ಬಿಡಿಸಲಾಗದೆ ಒದ್ದಾಡಿದೆ ನಾನು
  ಈ ಪ್ರೇಮದ ಬ್ರಹ್ಮಗಂಟು.....

ಶ್ವೇತ

ಏ........ಶ್ವೇತ ಹೇಳುವೆಯಾ?
ನಿನ್ನನ್ನು
ನಾನು
ಯಾವ
ಅರ್ಥದಲಿ
ಬಿಳಿಯ
ಬಣ್ಣವೆಂದು
ತಿಳಿಯಲಿ
ಹೇಳು!!!!!
  ನೀನು
  ಬಿಳಿಯಾದರೆ
  ನಾನು
  ಕಪ್ಪು.....
  ನಾನು
  ಕಪ್ಪು
  ಅಂದ
  ಮಾತ್ರಕೆ
  ನನ್ನ
  ಪ್ರೀತಿ
  ಕಪ್ಪು
  ಅಲ್ಲ
  ಕಣೆ
  ನನ್ನ
  ಪ್ರೀತಿ
  ನಿನ್ನ
  ಹಾಗೆ
  ಶುದ್ಧ ಬಿಳಿ.......!!

Thursday, October 25, 2018

ನನ್ನ ಮಾವನ ಮಗಳೆ

ಸೀರೆಯಲಿ ನಿನ್ನಂದವ ಕಂಡೆ
ಹಸಿರು ಗಾಜಿನ ಬಳೆಯಲಿ 
ಆ ಸೊಬಗನು ಕಂಡೆ!!
ಅವಳೆ ನೀನು 
ಮಾವಿನ ತೋಪಿನ
ನನ್ನ ಮಾವನ ಮಗಳು.

ನೀನು

ಮಾವಿನ ತೋಪಲ್ಲಿ 
ಪರಿಚಯವಾದ 
ನನ್ನ ಮಾವನ 
ಮಗಳು ನೀ....
       ನಾನು ಪ್ರೀತಿಸಿದ
       ಹುಡುಗಿಯು ನೀನೆ
       ನನ್ನ ಮನೆ 
       ದೇವತೆಯು ನೀನೆ......

ನನ್ನ ಪ್ರೇಮ

ನಮ್ಮಿಬ್ಬರ ಕಥೆ.....

       ಅವಳು......ಅವಳ ಸಮೀಪ ಕರೆದ ಸಮಯದಲ್ಲಿ ನನ್ನೊಂದಿಗೆ ನಾನು ಇರಲಿಲ್ಲ. ನಾನೆಂಬುದು ನನಗೆ ಮರೆತೋಯ್ತು. ಅವಳನ್ನೆ ದಿಟ್ಟಿಸಿ ನೋಡುತ್ತಿದ್ದ ನನ್ನ ಕಣ್ಣೋಟ. ಅವಳ ಮೈ ಮಾಟ ನೋಡ್ತಾ....ನೋಡ್ತಾ. ಪ್ರಪಂಚವೆ ಮರೆತೋದೆ.
       ಯಾಕೊ ಅವಳು ಆ ದಿನ ಹೊಸತರಲ್ಲಿ ಪರಿಚಯವಾದ ಹುಡುಗಿ ತರ ಕಾಣ್ತಾಯಿದ್ಲು. ಆ ಮೊದಲ ಮರೆಯಲಾಗದ ಪ್ರೇಮ ನೋಟ, ಹೃದಯದ  ಕದ ತಟ್ಟೊ ಆ ಅವಳ ನಗು......ಆ ಅಂದ ಚೆಂದ. ಏನು ವಿಷ್ಮಯ , ನಗಂತು ಹೇಳಲಾಗದೆ.... ಪದಗಳು ಸಿಗದೆ ನಾನು ತಡವರಿಸಿದೆ...  .....
         ಪ್ರಪಂಚದ ಎಲ್ಲರ ಆಯಸ್ಸನ್ನು ನನಗೆ ಕೊಡಪ್ಪಾ ಎಂದು ಬೇಡಿದ ಮೊದಲ ಪ್ರೇಮಿ ನಾನು. ಆ ಪ್ರೇಮವೆ ಹಂತದ್ದು. ಅಲ್ಲಿ ಎಲ್ಲವು ಸ್ವಾರ್ಥ ಅನ್ಸುತ್ತೆ.
        ಆ ದಿನ ಅವಳು ಏನೋ ನೀಡಿದ ಆ ಉಡುಗೊರೆ. ನನಗೆಂದು ಮರೆಯಲಾಗದ ಉಡುಗೊರೆ ಎಂದು ಭಾವಿಸಿ ನಾನು ಮರೆಯದೆ ಜೋಪಾನ ಮಾಡಿದೆ. ಹೊಸ ಜನ್ಮವೆ ಸಿಕ್ಕಂತ ಈ ದಿನವನ್ನು ನಾನೆಂದಿಗು ಮರೆಯಲ್ಲ ಎಂದು ಮನದಲ್ಲೆ ಶಪಥ ಮಾಡಿದೆ.
        ನನಗಾಗಿ ಹೃದಯದಲಿ ಜಾಗವಿತ್ತ ಅವಳಿಗೆ......ನಾನು ನನ್ನ ಹೃದಯದಲ್ಲಿ ಅವಳನು ಪೂಜಿಸುವುದೆ ಸತ್ಯ ಎಂದು ನಂಬಿದೆ.
ಪ್ರಸಾದ್.......🖍

ಜೊತೆಗಾರ

ನನ್ನ ಕೊಡೆಯೇ....
ಮಳೆ ಹನಿಗಳ
ಸಿಂಚನದ ನಡುವೆ.....
ನನ್ನೊಂದಿಗೆ
ಸಾಗಿ ಬರುವ ಜೊತೆಗಾರ
ನೀನು.......
ಓ ಹಿಮಾಲಯವೆ
ಆ ಕೊರೆವಾ ಚಳಿಯಲ್ಲಿ
ನೀ ಏನು ಮಾಡುವೆ........

ಗೆಳತಿಯೆ

ನಿನ್ನ ಮರೆಯಬೇಕು ಎಂದುಕೊಂಡೆ
ಆದರೆ ನಿನ್ನ ಮರೆಯೊ ಜಾಗದಲ್ಲಿ
ನಾನು ಇಟ್ಟಿಲ್ಲ ಗೆಳತಿ
ನಾ ಹ್ಯಾಗೆ ಮರೆಯಲಿ ನಿನ್ನ......

ಒಡತಿ

ನನ್ನ ಹೃದಯದ ಒಡತಿ ನೀನು
ಆ ಒಡತಿಗೆ ಯಜಮಾನ ನಾನು
ಯಜಮಾನನಿಗೆ ಶಕ್ತಿಯು ನೀನೆ
ಗೆಲುವು ನೀನೆ..........

Wednesday, October 24, 2018

ಭ್ರಮೆ

ಎಲ್ಲೋ ಹುದುಗಿದ ಮನಸಿನ ಭಾವನೆಗಳು. ಎಲ್ಲೋ ಅಡಗಿದ ಆ ನಿನ್ನ ನೆನಪಿನ ತಲ್ಲಣ. ನನಗ್ಯಾಕೆ ಹೀಗೆ ಎಂದು ವ್ಯತೆ ಪಟ್ಟೆ. ಆದರೂ ಉತ್ತರ ಸಿಗದ ಬಾಳಲಿ ಒಬ್ಬಂಟಿಯಾದೆ ನಾನು. ಹೀಗೆ ಕಾಲು ಚಾಚಿ ಮನಸನು ಅವಲೋಕಿಸಿದ ಕ್ಷಣ ಕ್ಷಣಕು ನಿನ್ನ ನೆನಪು ಬಂದು, ನನ್ನ ಕಣ್ಣಂಚಲಿ ನೀರು ತುಂಬಿ ಬರುತಿದೆ ಹುಡುಗಿ. ಬಿಸಿಲಿಗೆ ಬೆಂದರು ಸರಿ, ಆ ಮೈ ಕೊರೆವ ಚಳಿಯಲು ಸರಿ ಆ ನೆನಪು ಮಾತ್ರ ಅಳಿಸಲಾದಂತೆ ಜಡ್ಡು ಹಿಡಿದು ಕೂತಿದೆ. ನಾನೇನು ಹೇಳಲಿ.....ಯಾರೊಂದಿಗೆ ಹೇಳಲಿ ಈ ನನ್ನ ಮನಸಿನ ಹೂರಣ. ಕಥೆಯಾಗಿದ್ದ ಈ ನನ್ನ ಬಾಳು ಈಗ ವ್ಯಥೆಯಾಗಿ ನನ್ನ ಕಾಡುತಿದೆ. ಹೇ.......ಭಗವಂತನೆ ನನ್ನಲ್ಲಿರುವ ಅಡಕಗಳಿಗೆ ಪರಿಹಾರ ತಿಳಿಸು. ಈ ಪ್ರೀತಿಯೆಂಬ ಭ್ರಮೆಯ ರಾಕ್ಷಸನ ಸಂಹಾರ ಮಾಡು. ಇದು ನನ್ನ ಬಿನ್ನಹ. ಭ್ರಮೆಯ ಬದುಕಿಗೊಂದು ಮುಕ್ತಿ ಕೊಡು.

ಪ್ರಸಾದ್.........🖍

ಹೂ..ಗಳ ಲೋಕದಲಿ

ತಿರು ತಿರುಗಿ ನೋಡಿ
ನೀನು ನನ್ನ  ಹಾಗೆ ನೋಡಬೇಡ
ನಿನ್ನ ಮುಖದ ಅಂದವು
ಹೇಳಿತು ನನಗೆ 
ಮೌನದಂತೆ ಇದ್ದು ಮರು ಮಾತಾಡದಿರು.
                                     -ಮಾನಸ
******************************************

                         ಹೇ........ಗೆಳತಿಯೆ.........
ಸ.......ಸಂಜೆಯ ತಂಪಿನಲಿ ನಿನ್ನ ನೆನೆದ ಸ್ನೇಹಿತ ನಾನು
ವಿ.........ವೀಣೆಯ ಮೀಟುವ ನಿನ್ನ ಭಕ್ತ ನಾನು
ತ........ತಾವರೆ ಕಂಗಳ ಚೆಲುವೆ ನೀನು
ಸವಿ.....ಸವಿ......ನೆನಪುಗಳ ಮೆಲುಕಾಗಿಸೊ ತಂಗಾಳಿ ನೀನು
ಸವಿತಾ.......ಅಲ್ಲ ನೀನು ಕವಿತಾ ( ತೆ )

- ಸವಿತಾ 
******************************************

ಚೆಲುವಿನ ಚೆಲುವನ್ನು ಮತ್ತೆ ಬಣ್ಣಿಸೊಲ್ಲ ನಾನು
ಬಣ್ಣಿಸೋಕೆ ಪದಗಳೆ ಸಾಲುತಿಲ್ಲವೇನು 
ಈ ನನ್ನ ಕವಿತೆಗೆ
ಹೀಗೆ ಇರು ನೀನು ಮನೆ ಬೆಳಕಾಗಿ 
ನಗುವಿನ ಜ್ಯೋತಿಯಾಗಿ
ಅವಳೆ ನೀನು..........ಹುಡುಗಿ
                                                           - ಜ್ಯೋತಿ
******************************************

ಹೇ.....ಕೇಳು ಹುಡುಗಿ
ಮೌನವೇ ನಿನಗೆ ಆಸರೆಯಾದರೆ 
ನೀನು ಮೌನವಾಗೆ ಇರು.
ನಕ್ಕರೆ ನಿನ್ನ ನಗುವು ಚಂದ.....
ಮೌನವಿದ್ದರೆ ನಿನ್ನ ಮೌನವು ಚಂದ......
                                         -ಉಷಾ
******************************************

ನಿನ್ನ ಧ್ವನಿ ( J )

ಎಂದೂ ಕೇಳದಿದ್ದ ಆ ನಿನ್ನ ಗುಭ್ಭಿ ಧ್ವನಿಯು
ನಿನ್ನೆ ಕೇಳಿದೆ ನಾನು......
ನಾನು ಹಿಂತಿರುಗಿ ನಿನ್ನ ನೋಡಿದ ಕ್ಷಣದಲಿ
ಮಾತನ್ನು ನಿಲ್ಲಿಸಿದೆ ನೀನು......
ಕೇಳದೆ ಇದ್ದ ಆ ನಿನ್ನ  ಧ್ವನಿಯ  ಕೇಳಿ
ಆ ಧ್ವನಿಯು ನಿಂದೆ ನಾ ಅಂದುಕೊಂಡೆ........
ಅಂದು ಕವಿತೆಯಲಿ ಬಣ್ಣಿಸಬೇಕಾದ ಈ ಧ್ವನಿಯ ಸಾಲು
ಈ ಕವಿತೆಯಲಿ ಹೇಳಿದೆ ನಾನು.....
ಆ ನಿನ್ನ ಗುಬ್ಭಿ ಧ್ವನಿಯು ನನ್ನ  ಕವಿತೆಗೆ ಸ್ಫೂರ್ತಿಯಾಯ್ತು
ಹಾಗೆ ಇರಲಿ ಆ ನಿನ್ನ ಗುಭ್ಭಿ ಧ್ವನಿಯು ಎಂದು ಎಂದೆಂದೂ......

Tuesday, October 23, 2018

ಹೆಸರನಿಡು

ನೀನು ಕೊಟ್ಟ ನವಿಲು ಗರಿಯು
ಮರಿ ಹಾಕಿದೆ 
ಹೆಸರವನ್ನಿತ್ತು ಹೋಗು 
ಬಾ.....ಗೆಳತಿ

ಬೇಸರ

ನೆನಪಿನ ತೀರದ ತಟದಲಿ ಕೂತು
ಖಾಲಿ ಹಾಳೆಯಲಿ ಗೀಚಿದ
ನೆನಪು ಮಾತ್ರ ನೀನು......

****************************

ನಿನ್ನನ್ನು ನೆನೆಸಿ ಬರೆಯುವ 
ಹುಚ್ಚ ನಾನು
ನನ್ನನೆಂದಿಗು ದೂರ ತಳ್ಳಬೇಡ

*******************************

ನೆನಪು

ಅದೆಷ್ಟೋ........sssss  ದಿನ ನಿನ್ನ ನೋಡದೆ ಕಾಯುತಿದ್ದ ಸಂಜೆ  ತೀರದ ನೆನಪು. ಹಗಲು ಗನಸಲು ಕನವರಿಸಿದ ಆ ನಿನ್ನ ಹೆಸರು. ಹೇ .......ಹುಡುಗಿ ಬಳಿ ಬಂದು ಹೇಳು, ಒಮ್ಮೆ ನಿನ್ನ ಮನದಲಿ ನಾನು ಬಂದಿರುವೆಯಾ?.....
ಆಸೆಯ ಸಂಜೆ ಕಡಲಿಗೆ ದೀಪವನಿತ್ತು ನಿನಗಾಗಿ ಕಾದ ಆ ಒಂದು ಸೊಗಸು ನನ್ನೀ ಮನದಿಂದ ಎಂದಿಗು ಅಳಿಯದೇನೋ..... ಎಂದು ಭಾಸವಾಗುತ್ತಿದೆ. ಹೇ......ಹುಡುಗಿ ಮತ್ತೆ ಹೇಳುವೆ ನಾನು ನನ್ನೀ ಮನಸಿನ ವ್ಯಥೆಯ. ಅಳುವುದೋ.....ನಗುವುದೋ..... ನಿನ್ನ ನೆನಪ ನಾ ನೆನೆಸಿ ತಿಳಿಯದೆ ಹೋದೆ.
ಈ ನೀರವ ಮೌನದಲಿ ಬೆಂದು ಹೋದೆ......ನಿನಗಾಗಿ ಕಾದು ಬಳಲಿ ಹೋದೆ.
ಹೇ, ನನ್ನ ಮನಸಿನ ನನ್ನ ಪ್ರೀತಿಯ .......ಹುಡುಗಿ ಮತ್ತೆ ಬರುವೆಯಾ ನಿನಗಾಗಿ ಪ್ರತಿಕ್ಷಣವು ಕಾಯಲೆ.

ಪ್ರಸಾದ್.......🖍

ಹನಿ ಸಿಂಚನಗಳು

      ಹೊರಗೆ ಬಂದು ನೋಡು........ಬಾ
  ನನ್ನ ಹುಡುಗಿ
ಚಂದ ಮಾಮನು ಕಾಯುತಿಹನು
ನಮ್ಮಿಬ್ಬರ ಪ್ರೀತಿ ತಿಳಿಯಲು

******

ಓ.......ಚಂದ ಮಾಮನೆ
ನೀನು ಸುಂದರನೆಂದು ಪ್ರತಿ ಕ್ಷಣವು ಬೀಗಬೇಡ
ನನ್ನವಳ ಅಂದವ ನೋಡು ಒಮ್ಮೆ

*******

ಕಡಲ ತೀರದಲಿ ಬರೆದ ನನ್ನ ಹುಡುಗಿಯ 
ಹೆಸರನು ಅಳಿಸುವೆಯಾ ಅಲೆಯೇ
ಆದರೆ ನನ್ನ ಹಣೆಯಲಿ ಬರೆದ
ಹುಡುಗಿಯ ಹೆಸರನು ಎಂದಿಗು ಅಳಿಸಲಾರೆ

********
ಪ್ರಸಾದ್...........🖍 

ಚಟುಕು ಕವನ


  1. ಯತ್ತಿಂದಲೋ....ಸುಳಿದ ಗಾಳಿಗೆ
  2. ಎದೆಯೊಡ್ಡಿದೆ ನಾನು
  1. ನೀನು ಬೀಸಿದ ಪ್ರೀತಿಯ ಬಲೆಗೆ
  2. ಹೃದಯ ಒಡ್ಡಿದೆ ನಾನು......


********



ನಸು ಸಂಜೆಯಾಯಿತು ಬಾ ಬೇಗ ಗೆಳತಿ
ಹೃದಯ ನಿನಗಾಗಿ ಕಾಯುತಿದೆ

ತೀರದ ಕಿರಣಗಳು ಕೂಡ
ನಮ್ಮಿಬ್ಬರನು ಕಾಯುತಿದೆ

*******

Monday, October 22, 2018

ನಿನ್ನ ಬಳಿ ಬಂದು

ಹೋ......ಅಂದು ಕೇಳಿದೆ ನಾನು ನಿನ್ನಲ್ಲಿಗೆ ಬಂದು. ನೀನು ಹೇಳಿದೆ ಅಂದು ಬಾಗಿಲ ಬಳಿ ನಿಂತು. ನನ್ನಿಂದ ಮಾತಿನ ಮುನಿಸೇಕೆ ಎಂದು........
ನನಗನಿಸಿದ್ದು ಅಂದೆ ನಾನು ಆಗ.....ಈಗ್ಯಾಕೆ ಎಲ್ಲ, ಒಳಗೆ ಬರಲೆ ಎಂದೆ. ಆಗ ನೀನು ವಯ್ಯಾರದಿಂದ ಹೇಳಿದೆ, ಕಣ್ಣನ್ನು ಮಿಟುಕಿಸಿ!!! ನಿನ್ನ ಹೃದಯಕೆ ಕಾಲಿಡಲು ನನ್ನ ಬಳಿ ಕೇಳಬೇಕೆ. ಆಗ ಅರ್ಥವಾಯ್ತು ಕೇಳು ನನಗೆ.... ನೀ ಕೊಟ್ಟ ಸನ್ನೆಯಲಿ ತಿಳಿದೊ ತಿಳಿದು ಗೊತ್ತಿಲ್ಲ ಆದರು ಅರ್ಥ ಆಯ್ತು. ಎಂದೊ ನಿಲ್ಲಿಸಿದ ಮಾತು......ಇಂದು ಮುಂದುವರೆಸಿದೆ ನೀನು...... ಕೋಪ, ತಾಪವೆಲ್ಲ ಮರೆತು ಮತ್ತೆ ಒಂದಾದ ಆ ಖುಷಿ ಎಲ್ಲವು ಮರೆಸಿತ್ತು ನನಗೆ.

ಪ್ರಸಾದ್..........🖍

ಯೌವ್ವನದ ಪ್ರೀತಿ

ಈ ಯೌವ್ವನದ ಪ್ರೀತಿಲಿ
ಸಿಹಿಯುಂಟು.....ಕಹಿಯುಂಟು
ಕಹಿಯಾದ ನೆನಪಿಗೆ ಮುಖ ಕೊಡವಿ
ಸಿಹಿಯಾದ ನೆನಪಿನ ಪ್ರೀತಿಗೆ ನಾನು ಮುಖ ಮಾಡಿ
ನಿನ್ನ ಮರೆತೆನಲ್ಲ ಮನಸೇ.

ಪ್ರಸಾದ್.........🖍

ಚುಟುಕು ಕವನಗಳು

ನನ್ನ ಚಂಚಲ ಮನಸೇ
ತೀರದಲಿ ಸಮೀಪಿಸಿ ಹೇಳು
ಯಾಕೆ ಹೀಗೆ ಎಂದು?

**************************************

ಹುಣ್ಣಿಮೆಯ ಪ್ರತಿ ರಾತ್ರಿಯಲಿ 
ನಿನ್ನ ಬಯಸೋ ಈ ಮನಸಿಗೆ
ತಂಗಾಳಿಯಾಗು ನೀ!!! 

**************************************

ನಿನ್ನ ಮರೆತು ನಾ ಬಾಳಿದ ಕ್ಷಣ
ನನ್ನ ಗೆಲುವೆಲ್ಲ ಸತ್ತು ಹೊಯ್ತು
ಕೇಳು ಪ್ರೇಯಸಿಯೆ.........

***************************************

ಬರ ಸಿಡಿಲು ಅಪ್ಪಳಿಸಿದರು
ನಾ ನಿನ್ನ ಬಿಡಲಾರೆ.....ಎಂದು ಮರೆಯಲಾರೆ
ಹೃದಯವಾಸಿಯೆ.

*****************ಪ್ರಸಾದ್*****************


ನಾ ಕಂಡ ಚೆಲುವೆ ನೀನು ( J )

ಹೇ.......ಚೆಲುವೆಯೇ......!!!!!!
ನಾನೆಂದು ಕಾಣದ ಈ ಅಂದದಲಿ 
ಕಡಲು ನನ್ನ ತೀರ ಸೆಳೆಯಿತು
ನೀ ತೊಡುವ ಎರಡು ಬಳೆಗಳ ಸದ್ದು
ನನ್ನೆದೆಯಲಿ ವೀಣೆಯು ಮೀಟುವ ಹಾಗೆ ಭಾಸವಾಯಿತು
     ಯಾಕೋ ಕಾಣೆ.... ನಾ ತಿಳಿಯಲಾರದೆ ಹೋದೆ
     ನಿನ್ನ ನಡಿಗೆಯು ಚೆನ್ನಾ.....ಹೆಜ್ಜೆಯು ಚೆಂದ
     ನೀ.......ಇಡುವ ಒತ್ತೊತ್ತು ಹೆಜ್ಜೆಯು.....
     ನನ್ನ ಕಣ್ಣಿಗೆ ಹಬ್ಬವೊ ಹಬ್ಬ 

ಹುಡುಗನೆದೆಯಲಿ ಪ್ರೀತಿಯ ಝೇಂಕಾರವು ಹರಿದು
ಆ ಝೇಂಕಾರಕೆ ನಿನ್ನ ಕಾಲ್ಗೆಜ್ಜೆ ನಾಚಿ ಸದ್ದು ಮಾಡಿತು
ಧನಿಯಾಗಿ ಹೊರ ಹೊಮ್ಮಿ ಝಿಣಿ......ಝಿಣಿ ಎನ್ನೊ ನಿನ್ನ ಕಾಲ್ಗೆಜ್ಜೆ ನಾದವು
ನನ್ನ ಮನಸನು ಕೆರಳಿಸಿ ಎಬ್ಬಿಸಿತು
        
        ಮಳೆ ಬಿಲ್ಲಿನಂತ ಕಪ್ಪು ಕಾಡಿಗೆಯ
        ಮೋಡದ ಹುಬ್ಬುಗಳ ಅಂಚಲಿ
        ಕೋಲ್ಮಿಂಚಿನಂತ ನಿನ್ನ ನೋಟವು 
        ನನ್ನ ಕಣ್ಮನ  ಸೆಳೆಯಿತು

ಹಾಗೆಂದು ತಿರುಗಾಡಬೇಡ 
ನನ್ನೆದುರು ಎಂದು ಮುಂದೆದೂ
ನಿನ್ನ ಚೆಲುವನ್ನು ಕದ್ದು ನೋಡಿ....ನೋಡಿ
ನನ್ನ ಕವಿತೆ ಸಾಲಲಿ ವರ್ಣಿಸುವಂತೆ ಮಾಡಿತು
       
        ನನ್ನೊಳಗಿನ ಯೌವನದ ಮನಸು
        ಗೀತೆಯ ಸಾಲಲಿ ನಿನ್ನ ಹೊಗಳುವಂತೆ  ಮಾಡಿತು
        ಮತ್ತೆ ಹೇಳಿತು ನನ್ನ  ಈ ಕವಿ ಹೃದಯವು 
        ಇವಳ ಅಂದವನು ಪದಗಳಲಿ ಕೂಡಿಸು ಎಂದು

ಹೇ.......ಚೆಲುವೆ ಹೀಗೆ ಇರು ಎಂದೆಂದೂ
ಹೃದಯ ಕವಿಗಳಿಗೆ ನೆನಪಾಗಿ
ಕೊನೆಯ ಸಾಲಿನಲಿ  ಹೇಳಿದೆ ನಾನು ನಿನ್ನ ಹೆಸರು
ಅವಳೆ ನೀನು ಕಣೆ........ಜ್ಯೋತಿ.......ಜ್ಯೋತಿ........ಜ್ಯೋತಿ.

********** ಪ್ರಸಾದ್ ( Friendship)**********
     
ನದಿ ತೀರದ ತಟದಲ್ಲಿ ಅಂಗಾತ ಬಿದ್ದು......ಮನಸಲಿ ಕನವರಿಸಿದೆನು ಕವಿತಾ( ತೆ ) ಕವಿತಾ ( ತೆ ).

***************ಪ್ರಸಾದ್*************

Sunday, October 21, 2018

ಅಮ್ಮಾ...ನೀನು

ನಿನ್ನೊಂದಿಗೆ ಮಗುವಾಗಿ ಇದ್ದವನು ನಾನು
ಮಗುವಾಗಿ ಆಡಿ ನಿನ್ನ ಮಡಿಲಲ್ಲಿ ಬೆಳೆದವನು ನಾನು
  ನನ್ನ ಕೈ ಹಿಡಿದು ನಡೆಸಿದವಳು ನೀನು
  ಕಣ್ಣೀರ ಒರೆಸಿದವಳು ನೀನು
ಪ್ರೀತಿಯ ಧಾರೆ ಎರೆಯುವವಳು ಇವಳು
ಅವಳೇ ನೀನು .............ಅಮ್ಮಾssssss.....


ನೋಡಬೇಡ ನನ್ನಾ

ಏ.......ಹುಡುಗಿ ,
ಹಿಂತುರುಗಿ ಆ ಓರೆ ನೋಟದಲಿ
ನೀ ಹಂಗೆ ನೋಡಬೇಡ ನನ್ನಾ..........!!!!!
    ಏ..........ಹುಡುಗಿ ,
    ಆ ಗುಳಿ ಕೆನ್ನೆಯ ಮುಖದಲಿ
    ನೀ ಹಂಗೆ ನಗು ಚೆಲ್ಲಬೇಡಾ.......!!!!!!
ಏ.........ಹುಡುಗಿ
ಮತ್ತೇನು ಹೇಳಲಿ........ಹೇಗೆ ಹೇಳಲಿ
ನನ್ನೀ ಮನಸಿನ ತಳಮಳವಾ..........!!!!!



ಮರೆತೆ ನಾನು

ಜಿನು......ಜಿನುಗೊ ಮಳೆಯಲಿ
ಕೊಡೆ ಹಿಡಿದು ನಡೆವ ನಿನ್ನ ಜೊತೆಯಲಿ.....!
ಮರೆತೆ ನನ್ನೆ ನಾನು.
       
         

ಬರುವೆಯಾ ?.....

ನನ್ನ ಮೊದಲ ಸ್ನೇಹಿತೆಯಾಗಿ
ನನಗೆ ಹೃದಯ ಪ್ರೇಮಿಯಾಗಿ
ನೀನು ಬರುವೆಯಾ!...... 
           ನನ್ನ ಅಮ್ಮನ ಸೊಸೆಯಾಗಿ
           ನನಗೆ ನೀನು ಹೆಂಡತಿಯಾಗಿ
           ನೀನು ಬರುವೆಯಾ!......
ನನ್ನ ಕಂದನ ತಾಯಿಯಾಗಿ
ನನಗೆ ಪ್ರೀತಿಯ ಕಂದನಾಗಿ
ನೀನು ಬರುವೆಯಾ!.......
            ನನ್ನ ಮನೆಯ ದೇವತೆಯಾಗಿ
            ನನಗೆ ಬಾಳಿನ ದಾರಿದೀಪವಾಗಿ
            ನೀನು ಬರುವೆಯಾ!......
            ಬರುವೆಯಾ!......
                        ಬರುವೆಯಾ!.....
 *******************ಪ್ರಸಾದ್**************



Saturday, October 20, 2018

ನನ್ನ ಗೆಳೆಯ - ಗೆಳತಿಯರು

ಎಲ್ಲೊ ಇದ್ದ ನಾವು......ಎಲ್ಲೊ ಒಂದಾಗಿ
ಸ್ನೇಹದ ಕೊಂಡಿಯನು ಬೆಸೆದು
ಬೆಸೆದ ಕೊಂಡಿಯನು ಹಬ್ಬಿಸಿ...ಮರವಾಗಿ ಬೆಳೆಸಿ
ಈ ಸ್ನೇಹವನ್ನು ನಾವು ಪೋಷಿಸೋಣ

ಹೊಸ ಸ್ನೇಹಿತೆ ನೀನು (ಸ್ನೇಹ)

ಹೊಸ ಗಳಿಗೆಯ ಹೊಸ ದಿನದಲಿ
ಹೊಸ ಜಾಗದಲಿ ಹೊಸದಾಗಿ ಪರಿಚಯವಾದ
ಹೊಸ ಗೆಳತಿ ನೀನು.
ನೀನ್ಯಾರೊ ನಂಗೊತ್ತಿಲ್ಲ.... ನಿನ್ನ ಹೆಸರೇನೆಂಬುದು ಮೊದಲೆ ತಿಳಿದಿಲ್ಲ
ನಿನ್ನ ನಗುವಿಗೆ ಸ್ನೇಹವಾಗಿ, ನಿನ್ನ ಮಾತಿಗೆ ಪರಿಚಯವಾಗಿ
ನನ್ನ ಮನಸಿಗೆ ಹತ್ತಿರವಾದೆ ನೀನು.
ಮತ್ತೆ ಹೇಳುವೆ ಗೆಳತಿ ನನ್ನ  ನಿನ್ನ ಈ  ಸ್ನೇಹ ಸಂಬಂಧ ಹೀಗೆ ಇರಲಿ ಎಂದು.
*****************************************
ನಿನ್ನ ಹೆಸರು ಮರೆತಿದೆ ನಾನು........ಆದರು ನಿನ್ನ ಸ್ನೇಹದ ನೆನಪಿದೆ ಗೆಳತಿ
ಪ್ರಸಾದ್.....🖍



ನನ್ನ ಮನದ ಮೌನದ ಮಾತು

ಈ ಬದುಕಿನ ಕಗ್ಗತ್ತಲ್ಲಿ ಯಾಕೆ ದೂರದೆ
ಮತ್ತೆ ಬಳಿ ಬಂದು ನನ್ನ ಬಳಿ ಸೇರಬಾರದೆ
ನಿನ್ನೆದೆಲ್ಲ ನಿನ್ನೆಗಾದರೆ.......ಇಂದಿಗೇನಿದೆ
ನೀ........ಹೇಳು ಮೌನವೆ......

ಹೇಳು ನೀನು

ಓ.......ಗೆಳತಿ ಹೇಳು ನೀನು
ಎಷ್ಟು ಸರಿ.........ನಿನ್ನೀ ಮೌನ ನನಗೆ ತರವೆ
ನಿನ್ನ ಧ್ಯಾನದ ಜಪವಿರುವ ಈ ಮನಸಲಿ
ನನ್ನ ಪ್ರೀತಿಯ ತಿರಸ್ಕಾರ ನಿನಗಿದು ತರವೆ.....ಹೇಳು ನೀನು.

Thursday, October 18, 2018

ಓ........ಪ್ರೇಯಸಿಯೆ,
ಹೀಗ್ಯಾಕೆ ಎಂದು ನಾನು ಕೇಳಲಾರೆ,
ಹೀಗ್ಯಾಕೆ ಎಂದು ನಾನು ವ್ಯಥೆ ಪಡಲಾರೆ,

ನನ್ನೊಂದಿಗೆ ಹೆಜ್ಜೆ ಹಾಕಿದ ಆ ತೀರದ ಗುರುತುಗಳು......ನನ್ನೊಂದಿಗೆ ಹಿಂಬಾಲಿಸಿದ ಆ ನನ್ನ ನೆರಳು ನನ್ನೊಂದಿಗೆ ಸದಾ ಹೇಳುತಿದೆ.
ಮಳೆ ಬಿಲ್ಲಿನ ಸಂಜೆಯಲ್ಲದ ಹೊತ್ತಲ್ಲಿ, ನಿನ್ನ ಬಯಸೋ ನನ್ನ ಮನಸಲಿ, ನೀನು ಹೇಳೊ ಕಾತುರದಲಿ, ನಾನು ಆಲಂಗಿಸಿದ ಕ್ಷಣದಲಿ, ನೀನು ಗುಟ್ಟಾಗಿ ಹೇಳೊ ಮುಂಚೆ......ನಾನು ಹೇಳಿದ ಆ ಒಂದು ಮಾತು.

Wednesday, October 17, 2018

ನೆನಪುಗಳು

ನಿನ್ನ ಕೈ ಹಿಡಿದು ನಡೆಸಿದ ಆ ನನ್ನ ನೆನಪು.......ಕಾಲು ಸಂಕದಿ ನೀನು  ಕಾಲು ಜಾರಿ ಬಿದ್ದ ಮತ್ತದೆ ನೆನಪು, ನನ್ನ ನಿನ್ನ ತೆನೆ ಭರಿತ ಪ್ರೇಮ ಭರಿತ ಗದ್ದೆಯಲಿ ಕೆಸರಾಟದ ಆ ಹಸಿ ಹಸಿ ನೆನಪು, ಆ ಸೂರ್ಯಸ್ತದಿ ಝರಿ ದಂಡೆ ಮೇಲೆ ನಿನ್ನ ಕೈ ಬೆರಳು ಹಿಡಿದು ನಿಂತು ಆ ಸೂರ್ಯನನ್ನು ತೋರಿಸಿ ನಿನ್ನ ಕೆನ್ನೆಗೆ ಮುತ್ತೊಂದು ನೀಡಿದ ಆ ಸೊಗಸು, ಅದೇ ತಿಳಿ ಸಂಜೆ ಹೊತ್ತಲ್ಲಿ ನನಗಾಗಿ ನೀನು ಕಾದು ನನ್ನ ಕಿವಿ ಹಿಂಡಿದ ಒಂದು ನೆನಪು, ಶಾಲೆಗೆ ಜೊತೆಯಾಗಿ ಹೋದ ನೆನಪು, ಈವಾಗ ನಿನ್ನ ನೆನಪನ್ನು ಬರೆಯುವಾಗಲೂ ಮತ್ತದೆ ಸವಿ ಸವಿ ನೆನಪು.......
ಈವಾಗಿನ ನೆನಪಿನ ಹನಿಗಿಂತ, ಹಳೆ ನೆನಪಿನ ಹನಿಗಳು ಎಷ್ಟು ಚೆನ್ನ ಅಲ್ವಾ? .........ಏನಂತಿಯಾ? ಚೆಲುವೆ ನೀನು.
ನಾ ಬರೆದ ಕವಿತೆ ಸಾಲು ನಿನ್ನ ಕುರಿತಾಗಿತ್ತು, ನಾ ಆಡಿದ ಮಾತು ನಿನ್ನ ಕುರಿತಾಗಿತ್ತು,
ನಾ ನೋಡಿದ ನೋಟ ನಿನ್ನ ಕುರಿತಾಗಿತ್ತು.......

ಎಲ್ಲವೂ ನಿನ್ನ ಕುರಿತಾದರೆ......ಬಾಕಿ ಎಲ್ಲವೂ ನಂದೆ.

ಮತ್ತೆ ನೆನಪು

ನಿನ್ನ ನೆನಪು ತುಂಬಿ ಬಂದ ಆ ಕ್ಷಣ
ಬರವಣಿಗೆಯ ರೂಪ ಪಡೆದೆ ಈ ನನ್ನ ಪುಟಗಳಲಿ,
ನೀನೆಂದು ನೆನಪಾಗ ಬೇಡ .......ಹಾಗೆ, ಹೀಗೆ....!
ನನ್ನ ಹೃದಯ ದನಿ ಕೂಗಿ ಹೇಳುತಿಹುದು
ಮಾಸಿದ ಮಂಜಿನ ಹನಿಯಂತೆ
ನೀ ನಾದೆ ಅಲ್ಲಿ.......ನಾ ನಾದೆ ಇಲ್ಲಿ
ನಮ್ಮಿಬ್ಬರ ಬಹು ದೂರದ ಸಂಗಮವು
ನೆನಪಾಗಿ ಅಳಿಯದೆ ಸಪ್ತ ಪದಿ ತುಳಿಯಲಿ ನಮ್ನ ಈ ಪ್ರೇಮ ಸಂಬಂಧ

ಇದೇ.......ನಮ್ಮಿಬ್ಬರ ಬಹು ದೂರದ ಕನಸು ಹೌದು....!
ನಿನ್ನ ನೆನಪಲಿ ನಾನಿಗ......

ನನ್ನಾಸೆ

ನನ್ನಾಸೆಯೆಲ್ಲ ನಿನ್ನಾಸೆಯಾಗಿ
ನಿನ್ನಾಸೆಯೆಲ್ಲ ನನ್ನಾಸೆಯಾಗಿ,
ಮತ್ತೆ ಬರ ಸೆಳೆಯಿತು ನಿನ್ನ ಮಡಿಲಲಿ

ನನ್ನೊಡಳ ದನಿಯಾಗಿ, ನನ್ನ ಹೃದಯ ಶೃುತಿಯಾಗಿ
ನಿನ್ನ ಕಾದೆ ಆ ತಿಳಿ ಸಂಜೆಯಲಿ
ಮತ್ತದೇ.......ನೆನಪು.
ನಿನ್ನ ಕಣ್ಣು ಹೇಳಿತು ನೀನು ನೋಡುದು ನನ್ನನ್ನೇ.......ನಿನ್ನ ತುಟಿಯು ಹೇಳಿತು ನನ್ನಿ ಒಂದು ಮುತ್ತಿಗಾಗಿ ಕಾದಿದೆ ಎಂದು...... ನಿನ್ನ ಕೈ ಬಳೆ ಸದ್ದು ಹೇಳಿತು ನೀನು ಕರೆಯುವುದು ನನ್ನನ್ನೆ.......ನಿನ್ನ ಕಾಲ್ಗೆಜ್ಜೆ ದನಿಯು ಕೂಗಿ ಹೇಳಿತು ನಿನ್ನವಳ ಬಳಿ ಸೇರು ಎಂದು...
        ಓ........ಪ್ರೇಯಸಿಯೆ,
ನನಗಾಗಿ ಕಾಯುತಲಿರುವ ನಿನಗೆ, ನನ್ನದೊಂದು ಪ್ರೀತಿಯ ಉಡುಗೊರೆ.
ಸಿಹಿಯಾದ....ಸವಿಯಾದ ಒಂದು..... ಮುತ್ತು
ನಾನು ಕವಿತೆ ಬರೀತಿನಿ......ಕವಿ ಅಲ್ಲ.
ನಾನು ಪ್ರೀತಿಸ್ತೀನಿ.......ಪ್ರೇಮಿ ಅಲ್ಲ.
ನಾನು ಚಿತ್ರ ಬಿಡಿಸ್ತೀನಿ......ಚಿತ್ರಕಾರನಲ್ಲ.
ನಾನು ಬರೀತಿನಿ......ಬರಹಗಾರನಲ್ಲ.
ನಾನು ಹುಡ್ಗೀರನ್ನ ನೋಡ್ತೀನಿ......ಪೋಲಿ ಅಲ್ಲ.

ನಾನು........ನಾನೆ........ನನಗೆ........ನಾನೆ
ನಾನೆ.......ಹೀಗೆ
ನಿನಗಾಗಿ.
ಸೀರೆಯುಟ್ಟ ನಿನ್ನ ಅಂದವ ನಾನು ನೋಡ ಬಾರದೆ,
ನಿನ್ನ ಅಂದವ ನೋಡಿ ನಾನು ಹೊಗಳ ಬಾರದೆ,

ಹೊಗಳಿ........ಹೊಗಳಿ ಬರೆದ ಈ ನನ್ನ ಪುಟಗಳು
ನಾಚಿ ನೀರಾಗಬಾರದೆ

ಮತ್ತೆ ಹಾಡಬೇಕೆಂದಿತು ಈ ನನ್ನ,
ಮನಸು.
ಮತ್ತೆ ನೋಡಬೇಕೆಂದಿತು ಈ ನನ್ನ,
ವಯಸು.

ಮತ್ತೆ ಮುಂದೇನು ನಾನು  ಹೇಳಲಿ ನಿನ್ನ,
ಕುರಿತು.
ಮುಂದೆ ಮತ್ತೇನು ಬರೆಯಲಿ ನಿನ್ನ,
ಪ್ರೀತಿ ಕುರಿತು.

ನಿನ್ನ ವಯಸ್ಸನ್ನು ನಾನು ಕೇಳಲಾರೆ
ನಿನ್ನ ಅಂದವಾ ಕುಂಚದಲಿ ಸೆರೆ ಹಿಡಿಯಲಾರೆ
ನಿನ್ನ ಪ್ರೀತಿನ ನನ್ನ ಹಾಡಲಿ ಬಣ್ಣಿಸಲಾರೆ, ಓ.....ಗೆಳತಿ,
ನನ್ನಿಂದ ಯಾಕೆ ದೂರಾದೆ?
ಮನಸ್ಸಿಂದ
 ಮನಸಿಗಾಗಿ
ಮನಸಿಗೋಸ್ಕರ
ಮನಸ್ಸು ಕೊಟ್ಟು
ಮನಸು ಮಾಡಿ
ಮನಸಾರೆ
ಮನಪೂರ್ವಕವಾಗಿ
ಮನಸು ಕೊಡುಳು ಅಂದ್ರೆ...
ಅದು ಹೆಣ್ಣು ಮಾತ್ರ.

ಸಪ್ತಪದಿ

ಮನಸ್ಸೆಂಬ ಕನ್ನಡೀಲಿ........ಮನಸಾಕ್ಷಿಯಾಗಿ,
ಹೃದಯವೆಂಬ ಬಾಗಿಲಲಿ.......ಹೃದಯ ಸಾಕ್ಷಿಯಾಗಿ,

ಕೈ ಹಿಡಿಯುವುದೆ.....ಸಪ್ತಪದಿ
ನೆನಪಿಗೆ ನೆನಪಾಗಿ, ಮನಸಿಗೆ ಹತ್ತಿರವಾಗಿ
ನಿನ್ನ ಬಾಳಲಿ ಬರುವೆ,
        ನೀನು ಕಾಯುವ ದಾರಿಯಲಿ, ಮುತ್ತಿನ ಮಳೆ
         ಸುರಿಸೋ ಪ್ರೇಮಿಯಾಗಿ.
ನಿನ್ನ ನೋಡುತಾ,
 ನನ್ನೆ ಮರೆತೆ ನಾನು...


ನಿನ್ನ ಬಿಟ್ಟು ಬೇರೆ,
ಏನು ಬೇಡ ಎಂದೆ ನಾನು.....
ನನ್ನ ಮೊದಲ ನೋಟಕೆ
ನೀನು ಸೆಳೆದೆ

ಪರಿಚಯವಾದೆ
ತುಂಟಿಯಾದೆ
ಸ್ನೇಹಿತೆಯಾದೆ
ಸಖಿಯಾದೆ
ಪ್ರೇಯಸಿಯಾದೆ
ಮಡದಿಯಾದೆ
ಜೊತೆಗಾತಿಯಾದೆ......

ಹೇ......ಹುಡುಗಿ


ಹೇ......ಹುಡುಗಿ,
ಕಾಡ ಬೇಡ ಹೀಗೆ
ನನ್ನ ಕವಿತೆಗಳಿಗೆ ಸೋಲಬೇಡ
ನನ್ನ ಚಿತ್ರಗಳಿಗೆ ಸ್ಫೂರ್ತಿಯಾಗಬೇಡ
ನನ್ನ ನೋಟಕೆ ಹಿಂತುರುಗಿ ನೋಡಬೇಡ.....

ಸೀರೆ

ನಾ ಕೊಟ್ಟ ಸೀರೆ.....ನಾ ಉಡಿಸಿದ ಸೀರೆ,

ಆ ಸೀರೆಯಲಿ ಸೆರೆಯಿಡಿದೆ......ನನ್ನ ರಾಣಿ ಅಂದವಾ!
ನನ್ನೆದೆಯಲಿ ನೀನು ಉಸಿರಾಗಿ ನಿಂತೆ.....
ಹರಿಯುವ ನದಿಯಲಿ ನೀನು ಹೊಳಪಿನ ಕಲ್ಲಾಗಿ ನಿಂತೆ.....
ನಾನು ಬರೆಯುವ ಖಾಲಿ ಹಾಳೆಯಲಿ ಕವನದಲಿ ನಿಂತೆ.....
ನನ್ನ ಮನದ ಮಸ್ತಕದಲಿ ನೆನಪಾಗಿ ನಿಂತೆ.....

Tuesday, October 16, 2018

ಸ್ನೇಹಕೆ.........ಸ್ನೇಹವೆ ಸಾಟಿ,
ಪ್ರೀತಿಗೆ......... ಪ್ರೀತಿಯೆ ಸಾಟಿ,
ಪ್ರೇಮಕೆ........ಪ್ರೇಮವೆ ಸರಿ ಸಾಟಿ......

ಇಲ್ಲಿ ಎಲ್ಲವು ಉತ್ತಮ, ಪರಿಪೂರ್ಣ.

ಎಲ್ಲ ಸಂಬಂಧಗಳಿಗು ಅದರದೆ ಆದ ಬೆಲೆ ಇದೆ,
ಎಲ್ಲ ಸಂಬಂಧಗಳನ್ನು ಗೌರವಿಸಿ ಉಳಿಸಿಕೊಳ್ಳೋಣ.

ಗೆಳತಿ

ಜೊತೆಯಾಗಿ ಇದ್ದೆ
ಜೊತೆಯಾಗಿ ನಿಂತೆ......
ಹೆಗಲಾಗಿ ಇದ್ದೆ
ಹೆಗಲಾಗಿ ನಿಂತೆ......


ಮತ್ಯಾಕೆ ದೂರ.....
ಮತ್ಯಾಕೆ ಮೌನ ......ನನ್ನಿಂದ, ಗೆಳತಿ.

ನೆನಪು

ನಾ ಬರೆಯದ ಕಾಗದದಲಿ.....
ಮುದ್ದಾದ ಅಕ್ಷರವಾದೆ,
ಆ ಅಕ್ಷರದ ಮಾಲೆಯಲಿ.......
 ಪದ ಪುಂಜವಾದೆ,
ಆ ಪದ ಪುಂಜಗಳಲಿ........
ಸಾಲು.....ಸಾಲು ನೆನಪಾದೆ.

ಆಸೆ

ಹರಿಯುವ ನದಿಗೆ ಕಡಲ ಸೇರೊ ಆಸೆ
ಬಿರಿಯುವ ಮಳೆಗೆ ಧರೆಗಿಳಿಯುವ ಆಸೆ
ಅಬ್ಬರಿಸುವ ಕಡಲ ಅಲೆಗೆ ದಡ ಸೇರೊ ಆಸೆ
ನನ್ನ ನಿನ್ನ ಈ ಪ್ರೀತಿಗೆ........ಒಂದಾಗಿ ಬೆರೆಯೊ ಆಸೆ........

ಅವಳ ಬಳಿ ಹೇಳು

ಓ......ಮೇಘವೇ,
ಧರೆಗಿಳಿದು ಬಂದು ಹೇಳು.....

                    ಓ.......ಸೂರ್ಯನೇ,
                     ಬೆಳಕಾಗಿ ಪ್ರಜ್ವಲಿಸಿ ಹೇಳು.....

ಓ.........ನಕ್ಷತ್ರಗಳೇ,
ರಾತ್ರಿ ಹೊತ್ತು ಮಿನುಗಿ ಹೇಳಿ.....
                   
                      ಓ........ಚಂದ್ರನೆ,
                      ಬೆಳದಿಂಗಳಾಗಿ ಬಂದು ಹೇಳು....

ಓ.......ಮೋಡವೆ,
ಮಳೆ ಸುರಿಸೊ ಮೊದಲು ಹೇಳು.....

                        ನಾನು ಪ್ರೀತಿಸಿದ ಹುಡುಗಿಗೆ ಹೇಳು,
                        ನನ್ನ   ಪ್ರೀತಿ   ಎಷ್ಟು ಪವಿತ್ರ ಎಂದು.

                         

ನಿನ್ನ ಜೊತೆ

ನಿನ್ನ ಕೊರಳಲಿ ಮಾಂಗಲ್ಯವಾಗಿ
ನಿನ್ನ ಕೈ ಬೆರಳಲಿ ಉಂಗುರವಾಗಿ
ನಿನ್ನ ಕಾಲ್ಬೆರಳಲಿ ಕಾಲುಂಗುರವಾಗಿ
ನಿನ್ನ ಹೃದಯದಲಿ ಪ್ರೀತಿಯ ಮುತ್ತುವಾಗಿ
ನಿನ್ನೊಂದಿಗೆ ಇರುವೆ........ಚೆಲುವೆ.

ಹನಿ ಜನಿ

ಇಲ್ಲಿ ಯಾರಿಗು ಯಾರು ಇಲ್ಲ.... ನಮಗೆ ನಾವೆ ಎಲ್ಲ....||